ಇನಾಯತ್ ಅಲಿ ನೇತೃತ್ವದ ಗುರುಪುರ ಕಂಬಳಕ್ಕೆ ಕ್ಷಣಗಣನೆ ಆರಂಭ: ಗೆದ್ದವರಿಗೆ ಚಿನ್ನ, ಬಂದವರಿಗೆ ಬೆಳ್ಳಿ ನಾಣ್ಯಗಳ ಸುರಿಮಳೆ!

ಮಂಗಳೂರು: ಗುರುಪುರ ಮಾಣಿಬೆಟ್ಟುವಿನಲ್ಲಿ ನಾಳೆ(ಏ.4) ಇನಾಯತ್ ಅಲಿ ಸಾರಥ್ಯದ 3ನೇ ವರ್ಷದ “ಮೂಳೂರು-ಅಡ್ಡೂರು” ಜೋಡುಕರೆ ಕಂಬಳವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಇಡೀ ಗುರುಪುರ ಸೀಮೆಯಲ್ಲಿ ಈಗ ಹಬ್ಬದ ವಾತಾವರಣ ಕಳೆಗುಟ್ಟಿದ್ದು, ಜಾತಿ-ಮತದ ಬೇಧವಿಲ್ಲದೆ ಸಹಸ್ರಾರು ಮಂದಿ ಈ ಕ್ರೀಡೋತ್ಸವದಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ.

ಕೋಣಗಳ ಮಾಲೀಕರಿಗೆ ಚಿನ್ನ-ಬೆಳ್ಳಿಯ ಸನ್ಮಾನ
ಈ ಬಾರಿಯ ಕಂಬಳದಲ್ಲಿ ಕ್ರೀಡಾಪಟುಗಳಿಗೆ ಮತ್ತು ಕೋಣಗಳ ಮಾಲೀಕರಿಗೆ ಅಭೂತಪೂರ್ವ ಗೌರವ ಧನವನ್ನು ಘೋಷಿಸಲಾಗಿದೆ. ಕಂಬಳದಲ್ಲಿ ಭಾಗವಹಿಸುವ ಪ್ರತಿಯೊಂದು ಕೋಣದ ಮಾಲೀಕರಿಗೆ ಬೆಳ್ಳಿಯ ನಾಣ್ಯ ಹಾಗೂ 30 ಕೆಜಿ ಹುರುಳಿಯನ್ನು ವಿತರಿಸುವ ಮೂಲಕ ಅವರ ಶ್ರಮವನ್ನು ಗೌರವಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕಣೆಹಲಗೆ ವಿಭಾಗದಲ್ಲಿ ನಿಗದಿತ ಎತ್ತರಕ್ಕೆ ನೀರು ಹಾಯಿಸುವ ಸಾಹಸ ತೋರುವ ಎಲ್ಲಾ ಕೋಣಗಳಿಗೆ ತಲಾ 1 ಗ್ರಾಂ ಚಿನ್ನದ ಪದಕ ನೀಡಿ ಪುರಸ್ಕರಿಸಲಾಗುವುದು. ಇದು ಕಂಬಳ ಇತಿಹಾಸದಲ್ಲೇ ಅತ್ಯಂತ ಆಕರ್ಷಕ ಬಹುಮಾನಗಳಲ್ಲಿ ಒಂದಾಗಿದೆ.

ಮಾಂಸಾಹಾರಿ ಊಟದ ಹೊಸ ಸಂಪ್ರದಾಯ
ಸಾಮಾನ್ಯವಾಗಿ ಕಂಬಳಗಳಲ್ಲಿ ಸಸ್ಯಾಹಾರಿ ಊಟದ ವ್ಯವಸ್ಥೆ ಇರುತ್ತದೆ. ಆದರೆ, ಈ ಬಾರಿ ಇನಾಯತ್ ಅಲಿ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಕಂಬಳಕ್ಕೆ ಕೋಣಗಳನ್ನು ತರುವವರಿಗೆ ಮತ್ತು ಸಾರ್ವಜನಿಕರಿಗೆ ಮಾಂಸಾಹಾರಿ ಊಟದ ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ. ಚಹ-ತಿಂಡಿ-ಪಾನೀಯಗಳ ಜೊತೆಗೆ ಈ ಮಾಂಸಾಹಾರಿ ಊಟದ ಸಂಪ್ರದಾಯವು ಕಂಬಳವನ್ನು ಒಂದು ದೊಡ್ಡ ʻಫುಡ್ ಫೆಸ್ಟಿವಲ್’ ಮಾದರಿಯಲ್ಲಿ ಬಿಂಬಿಸುತ್ತಿದೆ. ಇದು ಕಂಬಳದ ಇತಿಹಾಸದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದೆ.

ಗಣ್ಯರ ದಂಡು ಮತ್ತು ಸಾಂಸ್ಕೃತಿಕ ಮೆರುಗು
ಏಪ್ರಿಲ್ 4ರಂದು ಬೆಳಿಗ್ಗೆ 8:30ಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಕಂಬಳವನ್ನು ಉದ್ಘಾಟಿಸಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಮಾಜಿ ಸಂಸದ ಡಿ.ಕೆ. ಸುರೇಶ್, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ಸಾಕ್ಷಿಯಾಗಲಿದ್ದಾರೆ. ಇದರೊಂದಿಗೆ ಕೇರಳದ ಪ್ರಸಿದ್ಧ ಚೆಂಡೆವಾದನ, ಯಕ್ಷಗಾನ ಸಾಧಕರಿಗೆ ಸನ್ಮಾನ ಮತ್ತು ರಾತ್ರಿ ಹೊನಲು ಬೆಳಕಿನಲ್ಲಿ ನಡೆಯುವ ಆಕರ್ಷಕ ಸುಡುಮದ್ದು ಪ್ರದರ್ಶನ ನೋಡುಗರ ಕಣ್ಣು ಕುಕ್ಕಲಿದೆ.

ಮೈಸೂರು ದಸರಾದತ್ತ ಕಂಬಳದ ಪಯಣ
ಈ ಕಂಬಳದ ಹಿಂದಿರುವ ಇನಾಯತ್ ಅಲಿ ಅವರ ದೊಡ್ಡ ಕನಸೆಂದರೆ ಕರಾವಳಿಯ ಈ ಕ್ರೀಡೆಯನ್ನು ವಿಶ್ವವಿಖ್ಯಾತ ಮೈಸೂರು ದಸರಾ ವೇದಿಕೆಗೆ ತಲುಪಿಸುವುದು. ಕಳೆದ ಬಾರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಂಬಳಕ್ಕೆ ಬಂದು ನೀಡಿದ್ದ ಭರವಸೆಯನ್ನು ತಾಂತ್ರಿಕ ಕಾರಣಗಳಿಂದ ಜಾರಿಗೆ ತರಲು ಸಾಧ್ಯವಾಗದಿದ್ದರೂ, ಇನಾಯತ್ ಅಲಿ ಅವರು ಬೆನ್ನುಬಿದ್ದು ಮನವರಿಕೆ ಮಾಡಿಸಿದ್ದಾರೆ. ಈ ಮೂಲಕ ಕಂಬಳವನ್ನು ಅರಮನೆ ನಗರಿ ಮೈಸೂರಿನವರೆಗೆ ಕೊಂಡೊಯ್ದ ಕೀರ್ತಿ ಇನಾಯತ್ ಅಲಿ ಅವರ ಪಾಲಾಗಲಿದೆ.

error: Content is protected !!