ಸುರತ್ಕಲ್: ಸೂರಿಂಜೆ-ಕುತ್ಸೆತ್ತೂರು-ಶಿಬರೂರು-ಪಂಜ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಬೊಳ್ಳಾರಗೋಳಿಯಲ್ಲಿ ಬರೋಬ್ಬರಿ 63 ವರ್ಷಗಳ ಸುದೀರ್ಘ ಅವಧಿಯ ಆನಂತರ ಅತ್ಯಂತ ವಿಜೃಂಭಣೆಯ ಪಂಚ ದೈವಗಳ ನೇಮೋತ್ಸವ ಜರುಗಲಿದೆ. ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮವು ಏಪ್ರಿಲ್ 2ರಿಂದ ಏಪ್ರಿಲ್ 8ರವರೆಗೆ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ ಮಾಹಿತಿ ನೀಡಿದ್ದಾರೆ.

ಸುರತ್ಕಲ್‌ನ ಸೂರಜ್ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದಮೂರ್ತಿ ಶ್ರೀ ಮೂಡಿತ್ತಾಯ ಹಯವದನ ಭಟ್ ಕುತ್ತೆತ್ತೂರು ಇವರ ನೇತೃತ್ವದಲ್ಲಿ ನೇಮೋತ್ಸವದ ವಿಧಿ-ವಿಧಾನಗಳು ನಡೆಯಲಿವೆ. ಏಪ್ರಿಲ್ 2ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆಯು ಹೊರಡುವುದರೊಂದಿಗೆ ಚಾಲನೆ ಸಿಗಲಿದ್ದು, ಸತತ ಏಳು ದಿನಗಳ ಕಾಲ ಶಿಬರೂರು ಶ್ರೀ ಉಳ್ಳಾಯ ಮತ್ತು ಶ್ರೀ ಕೊಡಮಣಿತ್ತಾಯ, ಜಂತಬೆಟ್ಟು ಶ್ರೀ ಬಂಟ-ಸಾರಾಳ ಧೂಮಾವತಿ ಸೇರಿದಂತೆ ವಿವಿಧ ದೈವಗಳಿಗೆ ವೈಭವದ ನೇಮೋತ್ಸವಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ ಎಂದರು ತಿಳಿಸಿದರು.

ಈ ಐತಿಹಾಸಿಕ ನೇಮೋತ್ಸವದ ಯಶಸ್ಸಿಗಾಗಿ ಮಿತ್ತೋಡಿ ಅರಸುಮನೆ ಅಶೋಕ ಪೈವ ಹೆಗ್ಡೆ (ಗಡಿಪ್ರಧಾನರು), ಕುತ್ತೆತ್ತೂರು-ಸೂರಿಂಜೆ ಎಲ್ಲಾ ವರ್ಗದ ಮನೆತನದವರು ಹಾಗೂ ಗ್ರಾಮದ ಹತ್ತು ಸಮಸ್ತರು ಕೈಜೋಡಿಸಿದ್ದಾರೆ. ಇದರೊಂದಿಗೆ ತಿಬಾರಗುತ್ತಿನಾರ್ ಉಮೇಶ್ ಎನ್. ಶೆಟ್ಟಿ ಹಾಗೂ ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಗುತ್ತು ಮನೆತನದವರು, ಸಮಸ್ತ ವಿಲಯದಾರರು ಮತ್ತು ದೇಲಂತಬೆಟ್ಟು ಗ್ರಾಮದ ಹತ್ತು ಸಮಸ್ತರು ಈ ಧಾರ್ಮಿಕ ಕಾರ್ಯದ ಸಾರಥ್ಯ ವಹಿಸಿದ್ದಾರೆ. ಪಂಜದಗುತ್ತು ಮನೆತನ ಹಾಗೂ ಎಲ್ಲಾ ವರ್ಗದ ಗುತ್ತು ಮನೆತನದವರು, ಗ್ರಾಮದ ಹತ್ತು ಸಮಸ್ತರು ಮತ್ತು ಬೊಳ್ಳಾರುಗುತ್ತು ಕುಟುಂಬಿಕರು ಒಟ್ಟಾಗಿ ಸೇರಿ ಈ ಬೃಹತ್ ನೇಮೋತ್ಸವವನ್ನು ಆಯೋಜಿಸುತ್ತಿದ್ದಾರೆ. ಬೊಳ್ಳಾರಗೋಳಿಯ ಬಾಕಿಮಾರು ಗದ್ದೆಯಲ್ಲಿ ನಡೆಯಲಿರುವ ಈ ಅಪೂರ್ವ ಉತ್ಸವವು ಗುತ್ತು ಮನೆತನಗಳ ಒಗ್ಗಟ್ಟು ಮತ್ತು ಧಾರ್ಮಿಕ ನಿಷ್ಠೆಗೆ ಸಾಕ್ಷಿಯಾಗಲಿದೆ ಎಂದು ಜಯಪ್ರಕಾಶ್ ಸೂರಿಂಜೆ ನುಡಿದರು.

ನೇಮೋತ್ಸವದ ಅಂಗವಾಗಿ ಪ್ರತಿದಿನ ಸಂಜೆ ಮತ್ತು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಾದಿಗಳನ್ನು ಮನರಂಜಿಸಲಿವೆ. ಭಜನಾ ಸಂಕೀರ್ತನೆಗಳು, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯತೆ ಸೇರಿದಂತೆ ಏಪ್ರಿಲ್ 7ರಂದು “ಯಾನೊರಿ ಬರೋಲಿಯ” ಎಂಬ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ವಿನಂತಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ ಸಮಿತಿ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು, ಗೌರವಾಧ್ಯಕ್ಷರಾದ ಅನಿಲ್ ಶೆಟ್ಟಿ ತೇವು ಸೂರಿಂಜೆ, ಯೋಗೀಶ್ ಶೆಟ್ಟಿ ಮುಂಬಯಿ, ಕಾರ್ಯಾಧ್ಯಕ್ಷರಾದ ಮನೋಹರ ಶೆಟ್ಟಿ ಸೂರಿಂಜೆ, ಸ್ವಾಗತ ಸಮಿತಿ ಸಂಚಾಲಕರಾದ ಮೋಹನ್ ದಾಸ್ ಶೆಟ್ಟಿ ಬೊಳ್ಳಾರುಗುತ್ತು, ಮಾಧ್ಯಮ ಸಮಿತಿ ಸಹಸಂಚಾಲಕ ಪುಷ್ಷರಾಜ್ ಶೆಟ್ಟಿ ಮಧ್ಯ ಉಪಸ್ಥಿತರಿದ್ದರು.