IPL 2026: ಇಂದು ರಾಜಸ್ಥಾನ್‌, ಸಿಎಸ್‌ಕೆ ಮುಖಾಮುಖಿ

ಗುವಾಹಟಿ: ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ಇಂದು ತಮ್ಮ ಮೊದಲ ಪಂದ್ಯವನ್ನು ಗುವಾಹಟಿಯ ಬರ್ಸಪಾರಾ ಮೈದಾನದಲ್ಲಿ ಆಡಲಿವೆ. ಅನುಭವಿ ಆಟಗಾರ ಧೋನಿ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಚೆನ್ನೈ ತಂಡಕ್ಕಿಂತ ರಾಜಸ್ಥಾನ ಹೆಚ್ಚು ಬಲಿಷ್ಠವಾಗಿ ಕಾಣಿಸುತ್ತಿದೆ.

ವೈಭವ್‌ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್‌, ಪರಾಗ್‌, ಹೆಟ್ಮಾಯರ್‌ನಂತಹ ಹೊಡಿಬಡಿ ಆಟಗಾರರ ದಂಡೇ ರಾಜಸ್ಥಾನ ತಂಡದಲ್ಲಿದೆ. ಅಲ್ಲದೇ ಕಳೆದ ಬಾರಿ ಚೆನ್ನೈ ಪರ ಆಡಿದ್ದ ಆಲ್‌ರೌಂಡರ್‌ ರವೀಂದ್ರ ಜಡೇಜಾ ರಾಜಸ್ಥಾನದ ಪಾಲಾಗಿರುವುದು ತಂಡದ ಬಲವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ವಿಶ್ವಕಪ್‌ ಹೀರೋ ಸ್ಯಾಮ್ಸನ್‌, ಗಾಯಕ್ವಾಡ್, ಸರ್ಫರಾಜ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದರೂ ಉತ್ತಮ ಫಿನಿಷರ್‌ ಚೆನ್ನೈ ತಂಡದಲ್ಲಿಲ್ಲ. ಚೆನ್ನೈ ತಂಡವು ಬಲಿಷ್ಠ ಸ್ಪಿನ್ನರ್‌ಗಳನ್ನು ಹೊಂದಿದ್ದು, ವೇಗಿಗಗಳಿಗೆ ನೆರವಾಗುವ ಗುವಾಹಟಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದರಷ್ಟೇ ಗೆಲುವು ಚೆನ್ನೈ ಪಾಲಾಗುವ ಸಾಧ್ಯತೆ ಇದೆ.

ಗುವಾಹಟಿಯ ಬರ್ಸಪಾರಾ ಮೈದಾನ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ಒದಗಿಸುವ ಸಾಧ್ಯತೆ ಇದೆ. ಆದರೂ ಹೆಚ್ಚಿನ ಪ್ರಮಾಣದಲ್ಲಿ ಮಂಜು ಬೀಳುವ ಕಾರಣ ಗುರಿ ಬೆನ್ನತ್ತುವ ತಂಡಕ್ಕೆ ಹೆಚ್ಚು ನೆರವು ಸಿಗುವ ಅವಕಾಶವಿದ್ದು, ಟಾಸ್ ಗೆಲ್ಲುವ ತಂಡ ಬೌಲಿಂಗ್‌ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ.

 

error: Content is protected !!