ಬೆಂಗಳೂರು: ಇಂದಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನ ಪಂದ್ಯಾಟ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಮಾಜಿ ಚಾಂಪಿಯನ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾತ್ರಿ 7.30ಕ್ಕೆ ಮುಖಾಮುಖೀಯಾಗಲಿವೆ. ಎರಡೂ ತಂಡಗಳಲ್ಲೂ ಆರಂಭಿಕ ಪಂದ್ಯದಲ್ಲೇ ಅಭಿಮಾನಿಗಳನ್ನು ರೋಚಕತೆಯತ್ತ ಕರೆದೊಯ್ಯುವ ಸಾಧ್ಯತೆಗಳಿವೆ.

ಕಳೆದ ಬಾರಿ ಪ್ರಶಸ್ತಿ ಗೆದ್ದಿದ್ದ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ದುರಂತದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಸ್ಟೇಡಿಯಂನಲ್ಲಿ ಮತ್ತು ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, 2000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದೆ.

ಜನರ ನೂಕುನುಗ್ಗಲನ್ನು ತಪ್ಪಿಸಲು ಈ ಬಾರಿ ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್ ಮಾರಾಟ ವ್ಯವಸ್ಥೆ ಮಾಡಲಾಗಿದೆ. ವಿಶ್ವದ ಅತ್ಯಂತ ಶ್ರೀಮಂತ, ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿ ಎಂಬ ಕೀರ್ತಿ ಪಡೆದಿರುವ ಐಪಿಎಲ್‌ನ ಈ ಬಾರಿಯ ಆವೃತ್ತಿಯಲ್ಲಿ ಎರಡು ತಿಂಗಳಿಗೂ ಅಧಿಕ ಸಮಯ ಅಂದರೆ 65 ದಿನ ಪಂದ್ಯಾವಳಿ ಜರುಗಲಿದೆ. 10 ತಂಡಗಳು 13 ನಗರಗಳಲ್ಲಿ 74 ಪಂದ್ಯಗಳನ್ನು ಆಡಲಿವೆ. ಎರಡು ಹಂತಗಳಲ್ಲಿ ಪಂದ್ಯಾವಳಿ ನಡೆಯಲಿದೆ.

ಹಲವಾರು ಹಿರಿಯ ಮತ್ತು ಕಿರಿಯ ಆಟಗಾರರ ಮೇಲೆ ಗಮನ ಕೇಂದ್ರೀಕೃತವಾಗಿದೆ. ಅವರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಮಹೇಂದ್ರ ಸಿಂಗ್ ಧೋನಿ, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ದೇವದತ್ತ ಪಡಿಕ್ಕಲ್ ಸೇರಿದ್ದಾರೆ.ಧೋನಿಗೆ ಇದು ಕೊನೆಯ ಐಪಿಎಲ್ ಎನ್ನಲಾಗುತ್ತಿದೆ. ಈ ಬಾರಿಯೂ ಆರ್‌ಸಿಬಿ ತಂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದೆ.ಮೇ 31ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಫೈನಲ್ ಪಂದ್ಯ ನಡೆಯಲಿದೆ.