ಬೆಂಗಳೂರು: ನಗರದಿಂದ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಭೀಕರ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಬಂಗಾರುಪಾಳ್ಯಂ ಪಲಮಕುಲಪಲ್ಲಿ ಬಳಿ ನಡೆದಿದೆ.

ಬೆಂಗಳೂರು ಮೂಲದ ದಂಪತಿ ಹಾಗೂ ಅವರ 4 ವರ್ಷದ ಹೆಣ್ಣು ಮಗು ಮೃತ ದುರ್ದೈವಿಗಳು. ಕಾರು ಚಾಲಕನ ಸ್ಥಿತಿ ಗಂಭೀರ.

ಪಲಮನೇರ್‌ನಿಂದ ಚಿತ್ತೂರಿಗೆ ಬರುತ್ತಿದ್ದ ಬಸ್ಸು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂಗಾರುಪಾಳ್ಯಂ ಪಲಮಕುಲಪಲ್ಲಿ ಬಳಿ ನಿಂತಿತ್ತು. ಈ ವೇಳೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ದಂಪತಿ ಹಾಗೂ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನಲ್ಲೇ ಮೃತದೇಹಗಳು ಸಿಲುಕಿಕೊಂಡಿದ್ದವು. ಚಾಲಕನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ವಾಸವಿದ್ದ ಕುಟುಂಬ ಇಂದು ಮಧ್ಯಾಹ್ನ 12 ಗಂಟೆಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಟಿಕೆಟ್ ಪಡೆದುಕೊಂಡಿತ್ತು. ಅಪಘಾತಕ್ಕೆ ಚಾಲಕನ ಅತಿ ವೇಗದ ಚಾಲನೆಯೇ ಕಾರಣ ಎಂದು ಹೇಳಲಾಗುತ್ತಿದೆ.

ಅಪಘಾತದ ಬಳಿಕ ಬಸ್‌ನ ಹಿಂಭಾಗಕ್ಕೆ ಸಿಲುಕಿಕೊಂಡಿದ್ದ ಕಾರನ್ನು ಪೊಲೀಸರು ಜೆಸಿಬಿ ಮೂಲಕ ಹೊರತೆಗೆದಿದ್ದಾರೆ. ಸದ್ಯ ಪೊಲೀಸರು ಬೆಂಗಳೂರು ಮೂಲದ ದಂಪತಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.