ರಸ್ತೆ ದಾಟುತ್ತಿದ್ದ ವೇಳೆ ಪಾದಚಾರಿಗೆ ಕ್ರೇನ್ ಡಿಕ್ಕಿ: ಮಹಿಳೆ ಸಾ*ವು

ಉದ್ಯಾವರ: ಕ್ರೇನ್ ಡಿಕ್ಕಿಯಾಗಿ ಪಾದಚಾರಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಇಂದು(ಮಾ.27) ನಡೆದಿದೆ.

ಮೃತರನ್ನು ಕಾರವಾರ ಮೂಲದ ದಿವ್ಯಾ (45) ಎಂದು ಗುರುತಿಸಲಾಗಿದೆ.

ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದ ತಮ್ಮ ಪುತ್ರಿಯನ್ನು ಕಾರಿನಲ್ಲಿ ಕಾರವಾರಕ್ಕೆ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಉದ್ಯಾವರ ಬಲಾಯಿಪಾಡೆ ಬಳಿ ಯು-ಟರ್ನ್ ಪಡೆದ ದಿವ್ಯಾ ಅವರು, ಮಗಳಿಗೆ ಉಪಾಹಾರಕ್ಕಾಗಿ ಗುಡ್ಡೆಯಂಗಡಿ ಬಳಿಯ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಪುತ್ರಿ ಕ್ರಿಕೆಟ್ ಬ್ಯಾಟ್ ಬೇಕೆಂದು ಕೇಳಿದ್ದಕ್ಕೆ ರಸ್ತೆಯ ಮತ್ತೊಂದು ಬದಿಗೆ ಹೋಗಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಾಗ ವೇಗವಾಗಿ ಬಂದ ಕ್ರೇನ್ ದಿವ್ಯಾ ಅವರಿಗೆ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.

ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ದಿವ್ಯಾ ಅವರನ್ನು ಸ್ಥಳೀಯರು ತಕ್ಷಣವೇ ಉಡುಪಿಯ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

​ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!