ಮಧ್ಯಪ್ರಾಚ್ಯದ ಕಿಚ್ಚು: ಕುವೈತ್ ಏರ್‌ಪೋರ್ಟ್ ಮೇಲೆ ಡ್ರೋನ್ ದಾಳಿ! ಶಾಂತಿ ಮಂತ್ರ ಜಪಿಸಿದ ಟ್ರಂಪ್; ಇಳಿಕೆ ಕಂಡ ಕಚ್ಚಾ ತೈಲ ದರ

ಕುವೈತ್ ಸಿಟಿ/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗುತ್ತಿದ್ದು, ಬುಧವಾರ (ಮಾರ್ಚ್ 25, 2026) ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಭೀಕರ ಡ್ರೋನ್ ದಾಳಿ ನಡೆದಿದೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಶಾಂತಿ ಯೋಜನೆಯ ಪ್ರಸ್ತಾವನೆ ಕಳುಹಿಸುವ ಮೂಲಕ ಯುದ್ಧ ಅಂತ್ಯಗೊಳಿಸುವ ಆಶಾವಾದ ವ್ಯಕ್ತಪಡಿಸಿದ್ದಾರೆ.

ಕುವೈತ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ಪ್ರಹಾರ
ಕುವೈತ್ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಹಿತಿ ಪ್ರಕಾರ, ಡ್ರೋನ್‌ಗಳು ವಿಮಾನ ನಿಲ್ದಾಣದ ಇಂಧನ ಟ್ಯಾಂಕ್‌ಗೆ ಅಪ್ಪಳಿಸಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ದಾಳಿಯಿಂದ ನಿಲ್ದಾಣಕ್ಕೆ ಸೀಮಿತ ಪ್ರಮಾಣದ ಹಾನಿಯಾಗಿದೆ ಎಂದು ಏಜೆನ್ಸಿ ವಕ್ತಾರ ಅಬ್ದುಲ್ಲಾ ಅಲ್-ರಾಜಿ ತಿಳಿಸಿದ್ದಾರೆ.

ಇರಾನ್‌ಗೆ ಟ್ರಂಪ್ ಶಾಂತಿ ಮಂತ್ರ: ತೈಲ ಬೆಲೆಯಲ್ಲಿ ಕುಸಿತ
ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಮಾರ್ಚ್ 24, 2026) ಇರಾನ್‌ಗೆ ಶಾಂತಿ ಯೋಜನೆಯನ್ನು ರವಾನಿಸಿದ್ದಾರೆ. “ಇರಾನ್ ನಮಗೆ ಅದ್ಭುತವಾದ ಉಡುಗೊರೆಯನ್ನು ನೀಡಿದೆ, ನಾವು ಸರಿಯಾದ ಜನರೊಂದಿಗೆ ವ್ಯವಹರಿಸುತ್ತಿದ್ದೇವೆ” ಎಂದು ಟ್ರಂಪ್ ಓವಲ್ ಆಫೀಸ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಶತ್ರುತ್ವವಿಲ್ಲದ ತೈಲ ಹಡಗುಗಳ ಸಂಚಾರಕ್ಕೆ ಇರಾನ್ ಮುಕ್ತ ಅನುವು ಮಾಡಿಕೊಟ್ಟಿದೆ. ಟ್ರಂಪ್ ಶಾಂತಿ ಯೋಜನೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ‘ಬ್ರೆಂಟ್ ಕ್ರೂಡ್’ ತೈಲ ದರ ಬುಧವಾರ ಶೇ. 6 ರಷ್ಟು ಭಾರಿ ಕುಸಿತ ಕಂಡಿದೆ.

ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 9 ಸಾವು
ಇನ್ನೊಂದೆಡೆ, ಲೆಬನಾನ್ ಮೇಲೆ ಇಸ್ರೇಲ್ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ದಕ್ಷಿಣ ಸಿಡಾನ್ ಪ್ರದೇಶದ ಪೆಲೆಸ್ಟೈನ್ ನಿರಾಶ್ರಿತರ ಶಿಬಿರ ಮತ್ತು ಅಡ್ಲೂನ್ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ಮಾಧ್ಯಮಗಳು ವರದಿ ಮಾಡಿವೆ. ಮೈ ಮೈ (Mieh Mieh) ನಿರಾಶ್ರಿತರ ಶಿಬಿರದ ಅಪಾರ್ಟ್‌ಮೆಂಟ್ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಭಾರತದೊಂದಿಗೆ ಟ್ರಂಪ್ ಚರ್ಚೆ
ಮಧ್ಯಪ್ರಾಚ್ಯದ ಪರಿಸ್ಥಿತಿಯ ನಡುವೆಯೇ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಜಾಗತಿಕ ತೈಲ ಪೂರೈಕೆಗೆ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಅಗತ್ಯತೆಯ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ.

ಒಂದು ಕಡೆ ಶಾಂತಿ ಮಾತುಕತೆ ನಡೆಯುತ್ತಿದ್ದರೆ, ಇನ್ನೊಂದೆಡೆ ಡ್ರೋನ್ ದಾಳಿಗಳು ಮುಂದುವರಿಯುತ್ತಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಈ ಯುದ್ಧದ ತೀವ್ರತೆ ತಗ್ಗಿದರೆ ಮಾತ್ರ ಜಾಗತಿಕ ಆರ್ಥಿಕತೆ ಚೇತರಿಸಿಕೊಳ್ಳಲು ಸಾಧ್ಯ.

error: Content is protected !!