ಮಂಗಳೂರು/ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಆವರಿಸಿರುವ ಬೆನ್ನಲ್ಲೇ ಭಾರತದ ಇಂಧನ ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯಿಂದಾಗಿ ಪರ್ಷಿಯನ್ ಗಲ್ಫ್‌ನ ಹೋರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿದ್ದ ಭಾರತದ ಎರಡು ಪ್ರಮುಖ ಎಲ್‌ಪಿಜಿ (LPG) ಹಡಗುಗಳು ಸೋಮವಾರ ಮುಂಜಾನೆ ಸುರಕ್ಷಿತವಾಗಿ ಅಂತರಾಷ್ಟ್ರೀಯ ಜಲಪ್ರದೇಶಕ್ಕೆ ಪ್ರವೇಶಿಸಿವೆ.

ಕಳೆದ ಕೆಲವು ದಿನಗಳಿಂದ ಇರಾನ್ ಮತ್ತು ಅಮೆರಿಕಾ ನಡುವಿನ ವಾಕ್ಸಮರ ಹಾಗೂ ಇಸ್ರೇಲ್‌ನ ಸೈನಿಕ ಕಾರ್ಯಾಚರಣೆಯಿಂದಾಗಿ ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಭಾರತಕ್ಕೆ ಅಡುಗೆ ಅನಿಲ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುವ ʻಜಗ್ ವಸಂತ್’ (Jag Vasant) ಮತ್ತು ʻಪೈನ್ ಗ್ಯಾಸ್’ (Pine Gas) ಎಂಬ ಎರಡು ಬೃಹತ್ ನೌಕೆಗಳು ಹೋರ್ಮುಜ್ ಜಲಸಂಧಿಯ ಅಪಾಯಕಾರಿ ವಲಯದಲ್ಲಿ ಸಿಲುಕಿಕೊಂಡಿದ್ದವು. ಇದು ಕರಾವಳಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳ ಇಂಧನ ಪೂರೈಕೆಯ ಮೇಲೆ ಆತಂಕ ಮೂಡಿಸಿತ್ತು.

ಸರ್ಕಾರಿ ಮೂಲಗಳ ಮಾಹಿತಿಯ ಪ್ರಕಾರ, ಭಾರತ ಸರ್ಕಾರದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಹಡಗುಗಳಿಗೆ ಸಂಚರಿಸಲು ಅನುಮತಿ ನೀಡಿದೆ. ಸೋಮವಾರ ಮುಂಜಾನೆ ಈ ಎರಡು ಹಡಗುಗಳು ಇರಾನ್ ಪಡೆಯಿಂದ ಅಗತ್ಯ ಕ್ಲಿಯರೆನ್ಸ್ ಪಡೆದು ಮುಕ್ತ ಸಮುದ್ರವನ್ನು ತಲುಪಿವೆ. ಈ ಬೆಳವಣಿಗೆಯು ಭಾರತದ ತೈಲ ಮತ್ತು ಅನಿಲ ಮಾರುಕಟ್ಟೆಗೆ ದೊಡ್ಡ ರಿಲೀಫ್ ನೀಡಿದೆ.

ಮಂಗಳೂರು ರಿಫೈನರಿ (MRPL) ಮತ್ತು ಸ್ಥಳೀಯ ಇಂಧನ ಘಟಕಗಳಿಗೆ ಪಶ್ಚಿಮ ಏಷ್ಯಾದಿಂದ ಬರುವ ಹಡಗುಗಳು ಅತ್ಯಂತ ನಿರ್ಣಾಯಕವಾಗಿವೆ. ʻಜಗ್ ವಸಂತ್’ ಹಡಗಿನ ಸುರಕ್ಷಿತ ಪ್ರಯಾಣವು ಕರಾವಳಿ ಭಾಗದ ಎಲ್‌ಪಿಜಿ ದಾಸ್ತಾನು ಮತ್ತು ವಿತರಣಾ ವ್ಯವಸ್ಥೆಗೆ ಹೆಚ್ಚಿನ ಬಲ ತುಂಬಲಿದೆ. ಯುದ್ಧದ ಕಾರಣದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದ್ದರೂ, ಹಡಗುಗಳ ಸಂಚಾರ ಸುಗಮವಾಗಿರುವುದು ಪೂರೈಕೆಯಲ್ಲಿನ ಕೊರತೆಯನ್ನು ನೀಗಿಸಲಿದೆ.
