ಇರಾನ್‌ನಲ್ಲಿ ಅಮೆರಿಕದ ಮಿಸೈಲ್ ರುದ್ರನರ್ತನ!: 175 ಶಾಲಾ ಮಕ್ಕಳ ಬಲಿ ಪಡೆದ ʻಟೊಮಾಹಾಕ್’ ಎಡವಟ್ಟು!

ಮಿನಾಬ್ (ಇರಾನ್): ಇರಾನ್‌ನ ಮಿನಾಬ್ ಪ್ರಾಂತ್ಯದಲ್ಲಿ ನಡೆದದ್ದು ಅಕ್ಷರಶಃ ಒಂದು ಘೋರ ದುರಂತ. ಮಕ್ಕಳ ನಗುವಿನಿಂದ ತುಂಬಿರಬೇಕಾದ ʻಮಿನಾಬ್ ಪ್ರಾಂತ್ಯ’ ಪ್ರಾಥಮಿಕ ಶಾಲೆಯ ಮೇಲೆ ಅಮೆರಿಕದ ಸುಧಾರಿತ ʻಟೊಮಾಹಾಕ್’ ಕ್ಷಿಪಣಿ ಅಪ್ಪಳಿಸಿದೆ. ಪರಿಣಾಮ ಬರೋಬ್ಬರಿ 175ಕ್ಕೂ ಹೆಚ್ಚು ಮಕ್ಕಳು ಮಣ್ಣಿನ ಪಾಲಾಗಿದ್ದಾರೆ!

ಅಮೆರಿಕದ ʻಟಾರ್ಗೆಟ್’ ಮಿಸ್ಟೇಕ್:
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಈ ದಾಳಿ ನಡೆದದ್ದು ಅಮೆರಿಕದ ಸೇನಾ ಪಡೆಗಳ ಎಡವಟ್ಟಿನಿಂದ. ಅಮೆರಿಕದ ಸೆಂಟ್ರಲ್ ಕಮಾಂಡ್ ಹಳೆಯ ಡೇಟಾವನ್ನು ಬಳಸಿಕೊಂಡು ಈ ಶಾಲೆಯನ್ನೇ ಮಿಲಿಟರಿ ಟಾರ್ಗೆಟ್ ಎಂದು ಭಾವಿಸಿತ್ತು. ವಾಸ್ತವವಾಗಿ, ಆ ಕಟ್ಟಡ ಹಿಂದೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್‌ನ ನೇವಲ್ ಬೇಸ್‌ನ ಭಾಗವಾಗಿತ್ತು. ಆದರೆ 2013ರಲ್ಲೇ ಅದನ್ನು ಶಾಲೆಯನ್ನಾಗಿ ಪರಿವರ್ತಿಸಲಾಗಿತ್ತು. ಆ ಸತ್ಯ ಅಮೆರಿಕದ ಅತ್ಯಾಧುನಿಕ ಉಪಗ್ರಹಗಳಿಗೂ ತಿಳಿಯಲಿಲ್ಲವೇ ಎಂಬ ಪ್ರಶ್ನೆ ಈಗ ಜಗತ್ತನ್ನು ಕಾಡುತ್ತಿದೆ.

ಟ್ರಂಪ್ ಅವರ ವಿಚಿತ್ರ ವಾದ:
ಇತ್ತ ಅಮೆರಿಕದ ತನಿಖಾ ವರದಿಗಳೇ ಇದು ನಮ್ಮ ತಪ್ಪು ಎನ್ನುತ್ತಿದ್ದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಹೊಸ ಬಾಂಬ್ ಸಿಡಿಸಿದ್ದಾರೆ. “ಈ ದಾಳಿಯ ಹಿಂದೆ ಇರಾನ್ ಕೈವಾಡವಿದೆ. ಅವರಿಗೆ ಗುರಿ ಇಟ್ಟು ಹೊಡೆಯುವ ತಾಕತ್ತಿಲ್ಲ, ಹಾಗಾಗಿ ಅವರ ಕ್ಷಿಪಣಿಗಳೇ ಶಾಲೆಯ ಮೇಲೆ ಬಿದ್ದಿವೆ” ಎಂದು ಸುದ್ದಿಗಾರರ ಮುಂದೆ ಹೇಳಿದ್ದಾರೆ. ಆದರೆ ಸತ್ಯ ಏನೆಂದರೆ, ಇಡೀ ಯುದ್ಧದಲ್ಲಿ ʻಟೊಮಾಹಾಕ್’ ಕ್ಷಿಪಣಿಗಳನ್ನು ಬಳಸುತ್ತಿರುವುದು ಕೇವಲ ಅಮೆರಿಕ ಮಾತ್ರ!

ಕಣ್ಣೀರಿನ ಕಡಲಲ್ಲಿ ಮಿನಾಬ್:
ಮಾರ್ಚ್ 3ರಂದು ನಡೆದ ಮಕ್ಕಳ ಅಂತ್ಯಕ್ರಿಯೆಯ ದೃಶ್ಯಗಳು ಎಂತವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಪೋಷಕರು ತಮ್ಮ ಪುಟ್ಟ ಮಕ್ಕಳಿಗಾಗಿ ಸಾಲು ಸಾಲು ಗುಂಡಿಗಳನ್ನು ತೋಡುತ್ತಿದ್ದರೆ, ಇಡೀ ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಆಯೋಗ ಅಮೆರಿಕದ ವಿರುದ್ಧ ಕೆಂಡಕಾರುತ್ತಿವೆ. ಶಾಲೆಯನ್ನು ಟಾರ್ಗೆಟ್ ಮಾಡುವುದು ಅಂತರಾಷ್ಟ್ರೀಯ ಯುದ್ಧ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಎಂದು ತಜ್ಞರು ಕಿಡಿಕಾರಿದ್ದಾರೆ.

ಕೇವಲ ಒಂದು ʻಡೇಟಾ ಎಂಟ್ರಿ’ ಅಥವಾ ತಾಂತ್ರಿಕ ಎಡವಟ್ಟು ಇಂದು ನೂರಾರು ಮನೆಗಳ ದೀಪವನ್ನು ಆರಿಸಿದೆ. ಎಷ್ಟೇ ಸುಧಾರಿತ ತಂತ್ರಜ್ಞಾನವಿದ್ದರೂ ಮನುಷ್ಯನ ಕ್ರೌರ್ಯಕ್ಕೆ ಕೊನೆಯೇ ಇಲ್ಲವೇನೋ?

error: Content is protected !!