ವಾಷಿಂಗ್ಟನ್/ದುಬೈ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಅರಬ್ಬೀ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕದ ʻಯುಎಸ್ಎಸ್ ಅಬ್ರಹಾಂ ಲಿಂಕನ್’ (USS Abraham Lincoln) ವಿಮಾನವಾಹಕ ಯುದ್ಧನೌಕೆಯ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ. ಆದರೆ, ಅಮೆರಿಕ ಈ ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.

ಇರಾನ್‌ನ ಪ್ರತಿಪಾದನೆ:
ಇರಾನ್‌ನ ಸರ್ಕಾರಿ ಮಾಧ್ಯಮಗಳ ವರದಿಯ ಪ್ರಕಾರ, ಓಮನ್ ಸಮುದ್ರದ ತೀರದಿಂದ ಸುಮಾರು 340 ಕಿ.ಮೀ ದೂರದಲ್ಲಿ ಅಮೆರಿಕದ ಯುದ್ಧನೌಕೆಯನ್ನು ಗುರಿಯಾಗಿಸಿ ಅತ್ಯಾಧುನಿಕ ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿದೆ. ಈ ದಾಳಿಯಿಂದಾಗಿ ಯುದ್ಧನೌಕೆಯು ಕಾರ್ಯನಿರ್ವಹಿಸಲು ಅಸಾಧ್ಯವಾಗಿದ್ದು, ಅಮೆರಿಕದ ಪಡೆಗಳು ಅಲ್ಲಿಂದ ಮರಳಿವೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಸ್ಪಷ್ಟನೆ:
ಇರಾನ್‌ನ ಈ ಹೇಳಿಕೆಗಳನ್ನು ಅಮೆರಿಕದ ಪೆಂಟಗನ್ ಮತ್ತು ಸೆಂಟ್ರಲ್ ಕಮಾಂಡ್ (CENTCOM) ನಿರಾಕರಿಸಿವೆ. “ಯುಎಸ್ಎಸ್ ಅಬ್ರಹಾಂ ಲಿಂಕನ್ ಯುದ್ಧನೌಕೆಯು ಸುಸ್ಥಿತಿಯಲ್ಲಿದ್ದು, ‘ಆಪರೇಷನ್ ಎಪಿಕ್ ಫ್ಯೂರಿ’ ಭಾಗವಾಗಿ ತನ್ನ ಕಾರ್ಯಾಚರಣೆಯನ್ನು ಮುಂದುವರಿಸುತ್ತಿದೆ” ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಅಲ್ಲದೆ, ಇರಾನ್‌ನ ಸಣ್ಣ ಹಡಗೊಂದು ಅಮೆರಿಕದ ನೌಕೆಯ ಸಮೀಪಕ್ಕೆ ಬಂದಾಗ ಎಚ್ಚರಿಕೆಯ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಫೆಬ್ರವರಿ 28 ರಿಂದ ಇಸ್ರೇಲ್ ಪಡೆಗಳೊಂದಿಗೆ ಸೇರಿ ಇರಾನ್ ವಿರುದ್ಧ ವಾಯು ಕಾರ್ಯಾಚರಣೆ ನಡೆಸಲು ಅಮೆರಿಕವು ಯುಎಸ್ಎಸ್ ಜೆರಾಲ್ಡ್ ಆರ್ ಫೋರ್ಡ್ ಮತ್ತು ಯುಎಸ್ಎಸ್ ಅಬ್ರಹಾಂ ಲಿಂಕನ್ ಎಂಬ ಎರಡು ಬೃಹತ್ ಯುದ್ಧನೌಕೆಗಳನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಿದೆ. ಸದ್ಯ ಅರಬ್ಬೀ ಸಮುದ್ರದಲ್ಲಿ ಅಮೆರಿಕದ ಹಲವು ವಿಧ್ವಂಸಕ ನೌಕೆಗಳು ಬೀಡುಬಿಟ್ಟಿದ್ದು, ಪರಿಸ್ಥಿತಿ ತೀವ್ರ ಕುತೂಹಲ ಕೆರಳಿಸಿದೆ.