ಮೋದಿ ಮೌನದ ಹಿಂದೆ ‘ಎಪ್‌ಸ್ಟೀನ್ ಫೈಲ್’ ನಂಟಿದೆಯೇ?: ಹರೀಶ್‌ ಕುಮಾರ್ ಗಂಭೀರ ಪ್ರಶ್ನೆ

ಮಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿರುವ ʻಜೆಫ್ರಿ ಎಪ್‌ಸ್ಟೀನ್’ ಪ್ರಕರಣದ ಕಡತಗಳಿಗೂ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೌನಕ್ಕೂ ನಂಟಿದೆಯೇ? ಎಂಬ ಅನುಮಾನವನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದರು.

ವಿಶ್ವದ ಅನೇಕ ಪ್ರಭಾವಿ ನಾಯಕರ ಹೆಸರು ಎಪ್‌ಸ್ಟೀನ್ ಪ್ರಕರಣದಲ್ಲಿ ಕೇಳಿಬರುತ್ತಿದೆ. “ಈ ಕಡತಗಳಲ್ಲಿ ಪ್ರಧಾನಿ ಮೋದಿ ಅವರು ಇನ್ವಾಲ್ವ್ ಆಗಿದ್ದಾರೆ ಎನ್ನುವ ಊಹಾಪೋಹಗಳು ಎದ್ದಿವೆ. ಇದೇ ಕಾರಣಕ್ಕೆ ಅವರು ಅಮೆರಿಕದ ಒತ್ತಡಕ್ಕೆ ಮಣಿದು ಕಾಂಪ್ರಮೈಸ್ ಆಗಿದ್ದಾರಾ? ಎನ್ನುವ ಸಂದೇಹ ಜನರಲ್ಲಿ ಮೂಡುತ್ತಿದೆ. ದೇಶದ ಮೇಲೆ ಪರಿಣಾಮ ಬೀರುವ ಇಂತಹ ಗಂಭೀರ ವಿಚಾರಗಳ ಬಗ್ಗೆ ಮೋದಿ ಅವರು ಒಂದೇ ಒಂದು ಪ್ರೆಸ್ ಮೀಟ್ ಮಾಡುತ್ತಿಲ್ಲವೇಕೆ? ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ಭಾರತದ ಆಡಳಿತ ಈಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೂಚನೆಯಂತೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, “ರಷ್ಯಾದಿಂದ ತೈಲ ಖರೀದಿ ರದ್ದು ಮಾಡಲು ಟ್ರಂಪ್ ನೀಡಿದ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿದ್ದರಿಂದಲೇ ಈಗ ನಮಗೆ ರಿಯಾಯಿತಿ ದರದ ತೈಲ ಸಿಗುತ್ತಿಲ್ಲ. ಇದರಿಂದ ದೇಶದಲ್ಲಿ ತೈಲ ಬಿಕ್ಕಟ್ಟು ಉಂಟಾಗಿದೆ. ದಾಸ್ತಾನು ಇದೆ ಎಂದು ಸುಳ್ಳು ಹೇಳುವ ಸರ್ಕಾರ, ಪರಿಸ್ಥಿತಿ ನಿಯಂತ್ರಿಸಲು ಎಸ್ಮಾ (ESMA) ಜಾರಿ ಮಾಡಿದ್ದೇಕೆ?” ಎಂದು ಆಕ್ರೋಶ ಹೊರಹಾಕಿದರು.

ಧಾನಿ ಮೋದಿ ಅವರು ವಿದೇಶಗಳಿಗೆ ಭೇಟಿ ನೀಡುವ ಹಿಂದೆ ದೇಶದ ಹಿತಾಸಕ್ತಿಗಿಂತ ಹೆಚ್ಚಾಗಿ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಅವರ ವ್ಯಾಪಾರ ವೃದ್ಧಿಯ ಉದ್ದೇಶವಿದೆ. ಅಂಬಾನಿ ಅವರಿಗೆ ಅಮೆರಿಕದಲ್ಲಿ 27 ಲಕ್ಷ ಕೋಟಿ ರೂ. ಮೊತ್ತದ ತೈಲ ವ್ಯವಹಾರದ ಪಾಲುದಾರಿಕೆ ಇದೆ. ಅವರ ಹಿತ ಕಾಯಲು ಹೋಗಿ ಭಾರತದ ಸಾಮಾನ್ಯ ಜನರ ಮೇಲೆ ಬೆಲೆ ಏರಿಕೆಯ ಬರೆ ಹಾಕಲಾಗುತ್ತಿದೆ ಎಂದು ಅವರು ದೂರಿದರು.

ಶೋಭಕ್ಕ ನಾಪತ್ತೆ!
“ಕಾಂಗ್ರೆಸ್ ಕಾಲದಲ್ಲಿ 10 ರೂ. ಗ್ಯಾಸ್ ಬೆಲೆ ಏರಿಕೆಯಾದಾಗ ಬೀದಿಗಿಳಿದು ಒಲೆ ಹಚ್ಚಿ ಚಹಾ ಮಾಡುತ್ತಿದ್ದ ಸಚಿವೆ ಶೋಭಾ ಕರಂದ್ಲಾಜೆ ಅವರು ಈಗ ಎಲ್ಲಿ ಹೋಗಿದ್ದಾರೆ? ಈಗ ಸಿಲಿಂಡರ್ ಬೆಲೆ 60 ರೂ. ಏರಿಕೆಯಾಗಿದ್ದರೂ ಅವರ ಅಡ್ರೆಸ್ಸೇ ಇಲ್ಲ. ಜಿಲ್ಲೆಯ ಸಂಸದರು ಮತ್ತು ಬಿಜೆಪಿ ಶಾಸಕರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ,” ಎಂದು ವ್ಯಂಗ್ಯವಾಡಿದರು.

“ದೇಶದಲ್ಲಿ ಈಗ ನಡೆಯುತ್ತಿರುವುದು ಪ್ರಜಾಪ್ರಭುತ್ವವಲ್ಲ, ಅದು ಸಂಪೂರ್ಣವಾಗಿ ತುಘಲಕ್ ದರ್ಬಾರ್ ಅನ್ನು ನೆನಪಿಸುತ್ತಿದೆ. ಯಾವುದೇ ಮಹತ್ವದ ನಿರ್ಧಾರಗಳನ್ನು ಜನಪರವಾಗಿ ತೆಗೆದುಕೊಳ್ಳುವ ಬದಲು, ರಾತ್ರಿ 12 ಗಂಟೆಗೆ ಏಕಾಏಕಿ ಜಿಎಸ್‌ಟಿ ಅಥವಾ ಬ್ಯಾಂಕ್ ವಿಲೀನದಂತಹ ಘೋಷಣೆಗಳನ್ನು ಹೊರಡಿಸಿ ಜನರನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ಅಧಿಕಾರಿಗಳು ಒಂದು ಕಡೆ 75 ದಿನಗಳ ತೈಲ ದಾಸ್ತಾನು ಇದೆ ಎನ್ನುತ್ತಾರೆ, ಆದರೆ ಮಾರುಕಟ್ಟೆಯಲ್ಲಿ ಕಮರ್ಷಿಯಲ್ ಗ್ಯಾಸ್ ಮತ್ತು ತೈಲ ಸಿಗುತ್ತಿಲ್ಲ. ಈ ದ್ವಂದ್ವ ನೀತಿಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಹಾರ್ಮುಜ್ ಜಲಸಂಧಿ ಬಂದ್ ಆಗಿರುವ ಸುದ್ದಿ ಬೆನ್ನಲ್ಲೇ ಹೋಟೆಲ್, ಫ್ಯಾಕ್ಟರಿಗಳು ಸ್ಥಗಿತಗೊಳ್ಳುತ್ತಿವೆ. ಕಾರ್ಮಿಕರು ಮತ್ತು ಸಾಮಾನ್ಯ ಜನರ ಬದುಕು ಬೀದಿಗೆ ಬೀಳುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಮೌನ ವಹಿಸಿರುವುದು ದುರಂತ,” ಎಂದು ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ, ಮಹಿಳಾ ಕಾಂಗ್ರೆಸ್ ಮುಖಂಡೆ ಅಪ್ಪಿ, ಮುಖಂಡರಾದ ಶುಭೋಧ ಆಳ್ವಾ,  ಸಲೀಮ್ ,  ನೀರಜ್ ಪಾಲ್ , ಟಿ.ಕೆ. ಸುಧೀರ್ , ಸೋಹನ್ ಆಳ್ವ ಮತ್ತಿತರರಿದ್ದರು.

error: Content is protected !!