ತಿರುವವನಂಥಪುರಂ: ಥಂಪನೂರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿ ಸುದ್ದಿಯಾಗಿದ್ದ ಆ “ಕುಂಭಮೇಳದ ಹುಡುಗಿ” ಮೊನಾಲಿಸಾ, ಈಗ ತಂದೆಯ ವಿರೋಧದ ನಡುವೆಯೂ ಮಹಾರಾಷ್ಟ್ರದ ಫರ್ಮಾನ್ ಖಾನ್ ಕೈ ಹಿಡಿದಿದ್ದಾಳೆ. ಫೇಸ್‌ಬುಕ್‌ನಲ್ಲಿ ಶುರುವಾದ ಈ ಆರು ತಿಂಗಳ ಪ್ರೇಮಕಥೆ, ಕೇರಳದ ಅರುಮನೂರು ಶ್ರೀ ನಯಿನಾರ್ ದೇವಸ್ಥಾನದಲ್ಲಿ ಮಂಗಳವಾದ್ಯಗಳ ನಡುವೆ ಸುಖಾಂತ್ಯ ಕಂಡಿದೆ.

ಪೊಲೀಸ್ ಸ್ಟೇಷನ್ ಟು ದೇವಸ್ಥಾನ!
ತನ್ನ ಮಗಳು ದೂರದ ಸಂಬಂಧಿಯನ್ನೇ ಮದುವೆಯಾಗಲಿ ಎಂದು ಹಠ ಹಿಡಿದಿದ್ದ ತಂದೆ ಜೈ ಸಿಂಗ್ ಬೋಂಸ್ಲೆ, ಮಗಳನ್ನು ಎಳೆದುಕೊಂಡು ಹೋಗಲು ಪೂವಾರ್‌ಗೆ ಬಂದಿದ್ದರು. ಆದರೆ ಆಗಷ್ಟೇ 18 ವರ್ಷ ತುಂಬಿದ ಮೊನಾಲಿಸಾ ತಲೆಬಾಗಲಿಲ್ಲ. ಪೊಲೀಸರ ಮುಂದೆ ನಿಂತು “ನನ್ನ ಬದುಕು ನನ್ನ ಇಷ್ಟ” ಎಂದು ಖಡಕ್ಕಾಗಿ ಹೇಳಿದಳು. ಕಾನೂನಿನ ಬೆಂಬಲ ಸಿಕ್ಕಿದ್ದೇ ತಡ, ಕೆಂಪು ಸೀರೆಯುಟ್ಟು, ಹಣೆಗೊಂದು ಸಿಂಧೂರವಿಟ್ಟು ಫರ್ಮಾನ್ ಖಾನ್ ಜೊತೆ ಸಪ್ತಪದಿ ತುಳಿದಿದ್ದಾಳೆ. ಫರ್ಮಾನ್ ಸಾಂಪ್ರದಾಯಿಕ ಬಿಳಿ ಶರ್ಟ್ ಮತ್ತು ಮುಂಡು ತೊಟ್ಟು ಕೇರಳದ ಅಳಿಯನಾಗಿ ಮಿಂಚಿದ್ದಾನೆ.
ಇದು ʻರಿಯಲ್ ಕೇರಳ ಸ್ಟೋರಿ’..
ಈ ಮದುವೆಗೆ ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರೇ ಸಾಕ್ಷಿಯಾಗಿದ್ದು ವಿಶೇಷ. ಈ ಜೋಡಿಗೆ ಆಶೀರ್ವದಿಸಿದ ಅವರು, “ಇದುವೇ ರಿಯಲ್ ಕೇರಳ ಸ್ಟೋರಿ” ಎಂದು ಬಣ್ಣಿಸಿದ್ದಾರೆ. ಸಿಪಿಎಂ ನಾಯಕ ಎಂ.ವಿ. ಗೋವಿಂದನ್ ಮತ್ತು ಸಂಸದ ಎ.ಎ. ರಹೀಮ್ ಕೂಡ ಹಾಜರಿದ್ದು ಈ ಅಂತರ್ಧರ್ಮೀಯ ವಿವಾಹಕ್ಕೆ ಬೆಂಬಲ ಸೂಚಿಸಿದ್ದಾರೆ.

ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ತನ್ನ ಕಣ್ಣೋಟದಿಂದಲೇ ವೈರಲ್ ಆಗಿದ್ದ ಈ ಇಂದೋರ್ ಮೂಲದ ಹುಡುಗಿ, ಈಗ ಮಲಯಾಳಂನ ʻನಾಗಮ್ಮ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾಳೆ. ಅತ್ತ ಬಾಲಿವುಡ್‌ನಲ್ಲೂ ʻದಿ ಡೈರಿ ಆಫ್ ಮಣಿಪುರ’ ಕೈಯಲ್ಲಿದೆ.

ತಂದೆಯ ಕಣ್ಣೀರು ಮತ್ತು ಮಗಳ ಛಲ..
ಆದರೆ ಈ ಕಥೆಯ ಇನ್ನೊಂದು ಮಗ್ಗುಲು ತುಂಬಾ ನೋವಿನದ್ದು. ಇಂದೋರ್‌ನಿಂದ ಮಗಳನ್ನು ಹುಡುಕಿಕೊಂಡು ಬಂದಿದ್ದ ತಂದೆ ಜೈ ಸಿಂಗ್ ಬೋಂಸ್ಲೆ, ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಹರಸಾಹಸ ಪಟ್ಟಿದ್ದರು. ಪೊಲೀಸ್ ಸ್ಟೇಷನ್‌ನಲ್ಲಿ ಮಗಳ ಕಾಲು ಹಿಡಿದು ಬೇಡಿಕೊಂಡರೂ ಮೊನಾಲಿಸಾ ಕರಗಲಿಲ್ಲ. “ನನಗೆ 18 ವರ್ಷ ತುಂಬಿದೆ, ನಾನು ಯಾರ ಜೊತೆ ಇರಬೇಕು ಎನ್ನುವುದು ನನ್ನ ನಿರ್ಧಾರ” ಎಂದು ಆಕೆ ಖಡಕ್ ಆಗಿ ಹೇಳಿದಾಗ ಪೊಲೀಸರಿಗೂ ಕಾನೂನಿನ ಮುಂದೆ ಕೈಕಟ್ಟಿ ಕುಳಿತುಕೊಳ್ಳುವುದು ಅನಿವಾರ್ಯವಾಯಿತು.

ಸಿನಿಮಾ ಆಫರ್‌ಗಳ ಬೆನ್ನಲ್ಲೇ ಈ ಅಂತರ್ಧರ್ಮೀಯ ವಿವಾಹ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಏನೇ ಇರಲಿ, ಹಿರಿಯರ ಆಶೀರ್ವಾದವಿಲ್ಲದೆ ಶುರುವಾದ ಈ ಸಂಸಾರ ನೌಕೆ ಯಾವ ದಡ ಸೇರುತ್ತದೆ? ಆ ನೀಲಿ ಕಣ್ಣಿನ ಸುಂದರಿಯ ಬಾಳಲ್ಲಿ ಈ ನಿರ್ಧಾರ ಸುಖ ತರುತ್ತಾ? ಕಾಲವೇ ಉತ್ತರ ನೀಡಬೇಕು.