ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಂಬಳದ ವಿಚಾರವಾಗಿ ಹೊತ್ತಿಕೊಂಡ ರಾಜಕೀಯ ಕಿಡಿ, ಈಗ ಕರಾವಳಿಯ ನಂಬಿಕೆಯ ಕೇಂದ್ರಬಿಂದುಗಳಾದ ದೈವ ಮತ್ತು ದೇವರ ಅಂಗಳಕ್ಕೆ ತಲುಪಿದೆ. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ನಡುವಿನ ಈ ಜಿದ್ದಾಜಿದ್ದಿ ಕರಾವಳಿ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

ಕಾಪುವಿನಲ್ಲಿ ನಡೆಯುತ್ತಿರುವ ಕಂಬಳದ ಆಯೋಜನೆಯ ವಿಚಾರದಲ್ಲಿ ಕ್ರೆಡಿಟ್ ವಾರ್ (ಶ್ರೇಯಸ್ಸಿನ ರಾಜಕಾರಣ) ಆರಂಭವಾಗಿತ್ತು. ಆದರೆ, ಈ ಚರ್ಚೆ ಕೇವಲ ಅಭಿವೃದ್ಧಿಗೆ ಸೀಮಿತವಾಗದೆ, ವೈಯಕ್ತಿಕ ನಿಂದನೆಯ ಹಂತಕ್ಕೆ ತಲುಪಿತು. ವಿನಯ್ ಕುಮಾರ್ ಸೊರಕೆ ಅವರು ಶಾಸಕರ ಮಗನ ಆರ್ಥಿಕ ವ್ಯವಹಾರ ಹಾಗೂ ʻಅದಿರು ಲೂಟಿ’ಯಂತಹ ಗಂಭೀರ ಆರೋಪಗಳನ್ನು ಮಾಡಿದ್ದು ಈ ಸಂಘರ್ಷಕ್ಕೆ ತುಪ್ಪ ಸುರಿದಂತಾಗಿದೆ.

ತಮ್ಮ ಮೇಲೆ ಮತ್ತು ತಮ್ಮ ಕುಟುಂಬದ ಮೇಲೆ ನಡೆಯುತ್ತಿರುವ ವೈಯಕ್ತಿಕ ದಾಳಿಯಿಂದ ಮನನೊಂದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ದೈವದ ಮೊರೆ ಹೋಗಿದ್ದಾರೆ. ಕಾಪುವಿನ ಪ್ರಸಿದ್ಧ ಶ್ರೀ ಹೊಸ ಮಾರಿಗುಡಿ ಅಮ್ಮನ ಸನ್ನಿಧಿ ಹಾಗೂ ಪೇಟೆಬೆಟ್ಟು ಬಬ್ಬುಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವ ಶಾಸಕರು, ತಮ್ಮ ಮಗನ ಆರ್ಥಿಕ ವ್ಯವಹಾರ ಮತ್ತು ಅದಿರು ಲೂಟಿಯ ಬಗ್ಗೆ ಸೊರಕೆ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಎಂದು ದೈವದ ಮುಂದೆ ಮೊರೆಯಿಟ್ಟಿದ್ದಾರೆ.
ಸೊರಕೆ ಅವರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಮತ್ತು ರಾಜಕೀಯ ಲಾಭಕ್ಕಾಗಿ ಪದೇ ಪದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಶಾಸಕರು, “ಸುಳ್ಳು ಸಾಯಬೇಕು, ಸತ್ಯ ಗೆಲ್ಲಬೇಕು” ಎಂಬ ಆಶಯದೊಂದಿಗೆ ದೇವರಿಗೆ ಶರಣಾಗಿದ್ದಾರೆ.

ಕಳೆದ 40 ವರ್ಷಗಳಿಂದ ಉದ್ಯಮ ನಡೆಸುತ್ತಾ ಬಂದಿರುವ ತಮಗೆ ರಾಜಕೀಯವು ಕೇವಲ ಜನಸೇವೆಯ ಮಾಧ್ಯಮವೇ ಹೊರತು ಅನಿವಾರ್ಯವಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದು ಕೇವಲ ಪ್ರಾರ್ಥನೆಯೇ ಹೊರತು ಆಣೆ-ಪ್ರಮಾಣವಲ್ಲ ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಕಾಪು ಕ್ಷೇತ್ರದಲ್ಲಿ ಕಂಬಳದ ನೆಪದಲ್ಲಿ ಶುರುವಾದ ಈ ರಾಜಕೀಯ ಸಂಘರ್ಷವು ಈಗ ನಂಬಿಕೆ ಮತ್ತು ಸತ್ಯದ ಪರೀಕ್ಷೆಯಾಗಿ ಮಾರ್ಪಟ್ಟಿದ್ದು, ಮುಂಬರುವ ದಿನಗಳಲ್ಲಿ ಇದು ಯಾವ ತಿರುವು ಪಡೆಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
