ಮಂಗಳೂರು: ವಿಶ್ವ ಹಿಂದೂ ಪರಿಷತ್ ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಮಾರ್ಚ್ 26ರಿಂದ 29ರವರೆಗೆ ಕದ್ರಿ ಮೈದಾನದಲ್ಲಿ ನಡೆಯಲಿರುವ 25ನೇ ವರ್ಷದ ಶ್ರೀ ರಾಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಪತ್ರಿಕಾಗೋಷ್ಠಿಯು ಸೋಮವಾರ ಬೆಳಗ್ಗೆ ಶರವು ದೇವಸ್ಥಾನದಲ್ಲಿ ಜರುಗಿತು.

ಈ ವೇಳೆ ಶರವು ಮಹಾಗಣಪತಿ ದೇವಳದ ಮೊಕ್ತೇಸರರಾದ ರಾಘವೇಂದ್ರ ಶಾಸ್ತ್ರಿ ಮಾತನಾಡಿ, “ರಾಮ ನಮಗೆ ಆದರ್ಶ, ಮರ್ಯಾದಾ ಪುರುಷೋತ್ತಮ ಎಂದು ಆತನನ್ನು ಕರೆಯುತ್ತಾರೆ. ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿಯಬೇಕಾದರೆ ನಮ್ಮ ಹಬ್ಬಗಳನ್ನು ಆಚರಿಸಿ ಅದರಿಂದ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಂತೆ ಮಾಡಬೇಕು. ಈ ಕಾರ್ಯವನ್ನು ʻರಾಮೋತ್ಸವʼ ಎನ್ನುವ ಕಾರ್ಯಕ್ರಮದ ಮೂಲಕ ವಿಶ್ವ ಹಿಂದೂ ಪರಿಷತ್ ಮಾಡುತ್ತ ಬಂದಿದೆ. ಈ ಕಾರ್ಯಕ್ರಮ ಯಶಸ್ಸು ಕಾಣಲಿ, ಎಲ್ಲರಿಗೂ ಶುಭವಾಗಲಿ“ ಎಂದರು.

ಎಂ.ಬಿ. ಪುರಾಣಿಕ್ ಮಾತನಾಡಿ, “ಕಳೆದ 25 ವರ್ಷಗಳಿಂದ ರಾಮಭಕ್ತರನ್ನು ಒಂದೆಡೆ ಸೇರಿಸಿ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ರಾಮನಲ್ಲಿನ ಆದರ್ಶ ಸರ್ವ ಸಾಮಾನ್ಯ ಜನರಲ್ಲೂ ಇರಬೇಕು ಎಂಬ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ಹಿಂದೂ ಧರ್ಮಕ್ಕೆ ಅನ್ಯಧರ್ಮಗಳಿಂದ ತೊಂದರೆ ಇದೆ ಆದರೆ ಅದಕ್ಕೂ ಹೆಚ್ಚಾಗಿ ನಮ್ಮವರಿಂದಲೇ ಆತಂಕ ಇದೆ ಎಂದರು.
ಕಾರ್ಯಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ರಾಮಜನ್ಮಭೂಮಿಗಾಗಿ ನಡೆದಿರುವ ಹೋರಾಟ ನಮ್ಮ ಕಣ್ಣ ಮುಂದಿದೆ. ಸಾವಿರಾರು ಮಂದಿಯ ಬಲಿದಾನವನ್ನು ನಾವು ಕಂಡಿದ್ದೇವೆ. ರಾಮನ ಮಂದಿರವನ್ನು ಕಟ್ಟಲು ಪೇಜಾವರಶ್ರೀಗಳ ಮುಂದಾಳತ್ವದಲ್ಲಿ ವಿಹಿಂಪ ನಡೆಸಿರುವ ಹೋರಾಟಕ್ಕೆ ದೇಶದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು ಎಂದು ನೆನಪಿಸಿದರು.

ಅಯೋಧ್ಯೆಯಲ್ಲಿ ರಾಮನ ಶಕ್ತಿ ಉದ್ದೀಪನಗೊಳ್ಳಲು 2002ನೇ ಇಸವಿಯಿಂದ ಗ್ರಾಮ ಗ್ರಾಮಗಳಲ್ಲಿ ರಾಮೋತ್ಸವ ನಡೆಸಬೇಕು ಎಂಬ ನಿರ್ಣಯದಂತೆ ಎಲ್ಲೆಡೆ ಕಾರ್ಯಕ್ರಮ ನಡೆಸಲು ಆರಂಭವಾಯಿತು. ರಾಮನನ್ನು ಇಂದು ಜಗತ್ತಿನ ಎಲ್ಲರೂ ಮೆಚ್ಚಿಕೊಂಡ ಪರಿಣಾಮ ವೈಭವವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 26ರಿಂದ ನಾಲ್ಕು ದಿನಗಳ ಕಾಲ ರಾಮೋತ್ಸವ ನಡೆಯಲಿದ್ದು ಮೂರು ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗೂ 29ರಂದು ರಾವಣ ದಹನದ ಮೂಲಕ ಅಂತ್ಯವಾಗಲಿದೆ ಎಂದು ಸುದರ್ಶನ್ ನುಡಿದರು.

ಪ್ರಧಾನ ಸಂಚಾಲಕ ಗೋಪಾಲ್ ಕುತ್ತಾರ್, ವಿಹಿಂಪ ಜಿಲ್ಲಾಧ್ಯಕ್ಷ ಹೆಚ್.ಕೆ.ಪುರುಷೋತ್ತಮ್, ಗ್ರಾಮೋತ್ಸವದ ಅಧ್ಯಕ್ಷ ಸುನೀಲ್ ಆಚಾರ್, ವಿಹಿಂಪ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಭುಜಂಗ ಕುಲಾಲ್, ಮೋನಪ್ಪ ಭಂಡಾರಿ, ರತ್ನಾಕರ್ ಜೈನ್, ರಾಜಗೋಪಾಲ ರೈ, ಪುಷ್ಪಲತಾ ಗಟ್ಟಿ, ಸಂದೇಶ್ ಶೆಟ್ಟಿ ಅಗ್ರಜ ಮತ್ತಿತರರು ಉಪಸ್ಥಿತರಿದ್ದರು.
