ಊರು ನಾರುವ ಮುನ್ನ ಎಚ್ಚೆತ್ತುಕೊಳ್ಳಿ!! ಕಾರ್ಕಳದ ಪಳ್ಳಿ ಗ್ರಾಮಕ್ಕೆ ವಕ್ಕರಿಸಿತಾ ಫಿಷ್‌ ಮೀಲ್‌ ಘಟಕ?

ಕಾರ್ಕಳ: ಇಡೀ ಊರು ಸುಖನಿದ್ರೆಗೆ ಜಾರಿದ್ದಾಗ, ಯಾರಿಗೂ ಸುಳಿವು ಸಿಗದಂತೆ ಒಂದು ಕಮಟು ʻವಾಸನೆ’ಯ ಸಾಮ್ರಾಜ್ಯ ಸಿದ್ಧವಾಗುತ್ತಿದೆ. ಅದು ಪಳ್ಳಿ ಗ್ರಾಮದ ಶಾಂತ ಪರಿಸರವನ್ನು ಚಿರನಿದ್ರೆಗೆ ತಳ್ಳಲು ʻಫಿಷ್ ಮೀಲ್’ ಎಂಬ ಮಹಾಮಾರಿ ವಕ್ಕರಿಸಿತಾ?

ಮೊನ್ನೆಯಷ್ಟೇ ಪಡುಬಿದ್ರೆಯ ನಾಗರಿಕರು ಆಕ್ರೋಶದ ಕಟ್ಟೆಯೊಡೆದು ಹಾದಿಬೀದಿಯಲ್ಲಿ ಒದ್ದು ಓಡಿಸಿದ ಅದೇ ವಿಷಕಾರಿ ಘಟಕ, ಈಗ ಕಾರ್ಕಳದ ಪಳ್ಳಿಯಲ್ಲಿ ಸದ್ದಿಲ್ಲದೆ ಅಖಾಡಕ್ಕಿಳಿದಿದೆ ಎಂಬ ಸುದ್ದಿ ಊರವರನ್ನು ದಂಗುಬಡಿಸಿದೆ. ಪಂಚಾಯತ್ ಆಡಳಿತಕ್ಕೆ ಕೇಳಿದರೆ “ನಮಗೇನೂ ಅರಿವಿಲ್ಲ” ಎಂಬ ಮುಗ್ಧತೆಯಿಂದ ಉತ್ತರಿಸುತ್ತಿದ್ದಾರೆ. ಆದರೆ, ಊರಿನ ಜನರ ವಿಶ್ವಾಸಕ್ಕೆ ಕನ್ನ ಹಾಕಿ, ಜನವಸತಿ ಪ್ರದೇಶದೊಳಗೆ ಈ ಹಂತಕ ಘಟಕ ಸ್ಥಾಪನೆಯಾಗುತ್ತಿದೆ ಎನ್ನಲಾಗುತ್ತಿದ್ದು, ಇದರ ಹಿಂದೆ ಯಾರ ʻಕೈವಾಡ’ ಅಡಗಿದೆ ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆ!

ಮಾಲಿನ್ಯ ಅಂದರೆ ತಮಾಷೆಯಲ್ಲ…
ಈ ಫಿಷ್ ಮೀಲ್ ಎಂಬುದು ಕೇವಲ ಒಂದು ಕಾರ್ಖಾನೆಯಲ್ಲ; ಅದು ವಿಷಗಾಳಿ ಬೀಸುವ ಯಮಧರ್ಮನ ಕಚೇರಿ. ಮೀನು ಸಂಸ್ಕರಣೆಯ ವೇಳೆ ಹೊರಹೊಮ್ಮುವ ಆ ಭೀಕರ ದುರ್ವಾಸನೆ ಇದೆಯಲ್ಲ, ಅದು ಹರಡಲು ಶುರುವಾದರೆ ಸುತ್ತಮುತ್ತಲ ಕಿಲೋಮೀಟರ್ ವ್ಯಾಪ್ತಿಯಲ್ಲಿ ಉಸಿರಾಡುವುದೇ ಅಸಾಧ್ಯವಾಗುತ್ತದೆ. ಗಾಳಿಯಲ್ಲಿ ಬೆರೆಯುವ ಆ ಕಮಟು ವಾಸನೆ ಮಕ್ಕಳ ಮತ್ತು ವೃದ್ಧರ ಶ್ವಾಸಕೋಶವನ್ನು ಜಾಲರಿಯನ್ನಾಗಿ ಮಾಡುವುದು ಖಚಿತ. ಅಷ್ಟಕ್ಕೇ ಮುಗಿಯಿತೇ? ಖಂಡಿತ ಇಲ್ಲ.

ಬಾವಿ ನೀರೆಲ್ಲ ವಿಷವಾಗುವ ಕಾಲ ಸನ್ನಿಹಿತ:
ಈ ಘಟಕದಿಂದ ವಿಸರ್ಜನೆಯಾಗುವ ರಾಸಾಯನಿಕ ಮಿಶ್ರಿತ ತ್ಯಾಜ್ಯ ಮತ್ತು ಆ ಕಶ್ಮಲದ ನೀರು ಇದೆಯಲ್ಲ, ಅದು ಮಣ್ಣಿನ ಪದರಕ್ಕೆ ಇಳಿದ ತಕ್ಷಣ ಪಳ್ಳಿಯ ಪ್ರತಿ ಮನೆಯ ಬಾವಿ ನೀರು ವಿಷವಾಗಿ ಪರಿಣಮಿಸುತ್ತದೆ. ಹಚ್ಚ ಹಸಿರಿನ ಈ ಹಳ್ಳಿಯಲ್ಲಿ ಇನ್ನು ಮುಂದೆ ಮಲ್ಲಿಗೆ ಶುದ್ಧ ಗಾಳಿಯ ಬದಲು ʻಸಾವಿನ ವಾಸನೆ’ ಹಾಗೂ ನಿರ್ಮಲ ಜಲದ ಬದಲು ʻಕಶ್ಮಲದ ಕೆಸರು’ ಉಕ್ಕಿ ಬರಲಿದೆ. ಪಡುಬಿದ್ರೆಯ ಜನರಿಗೆ ಈ ನರಕದ ದರ್ಶನವಾಗಿತ್ತು, ಅದಕ್ಕೇ ಆ ಘಟಕವನ್ನು ಊರಾಚೆ ಓಡಿಸಿದ್ದರು. ಈಗ ಆ ಹಳಸಿದ ಗಂಟನ್ನು ತಂದು ನಮ್ಮ ಪಳ್ಳಿಯ ಮಡಿಲಿಗೆ ಹಾಕುತ್ತಿದ್ದಾರೆ ಎಂದರೆ ಇದು ಯಾವ ಸೀಮೆಯ ಅಭಿವೃದ್ಧಿ?

ಪಂಚಾಯತ್ ಮೌನವೋ ಅಥವಾ ಶಾಮೀಲೋ?
ಊರಿನ ಪ್ರಜೆಗಳಿಗೆ ತಿಳಿಯದಂತೆ, ಜವಾಬ್ದಾರಿಯುತ ಪಂಚಾಯತ್ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಉದ್ಯಮಿಯ ಈ ಮಸಲತ್ತು ಈಗ ಸ್ಫೋಟಗೊಳ್ಳುವ ಹಂತ ತಲುಪಿದೆ. ಪಂಚಾಯತ್‌ನವರ ಅರಿವಿಲ್ಲದೆ ಇಲ್ಲಿ ಫಿಷ್‌ ಮೀಲ್‌ ಘಟಕ ಸ್ಥಾಪನೆಯಾಗುತ್ತಿದೆ ಎಂದರೆ ಅಸಲಿಗೆ ಪಂಚಾಯತ್ ನಿದ್ರಿಸುತ್ತಿತ್ತೇ ಅಥವಾ ನಟಿಸುತ್ತಿತ್ತೇ? ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆಯಿಲ್ಲದ, ಜನವಸತಿ ದಟ್ಟವಾಗಿರುವ ಕಡೆಯಲ್ಲಿ ಇಂತಹ ಮಾರಕ ಘಟಕಕ್ಕೆ ಅನುಮತಿ ನೀಡಿದವರ ಅಸಲಿ ಮುಖವಾಡ ಕಳಚುವ ಕಾಲ ಹತ್ತಿರ ಬಂದಿದೆ.

ಪಡುಬಿದ್ರೆಯಲ್ಲಿ ಉಗಿಸಿಕೊಂಡು ಬಂದ ಅದೇ ಘಟಕಕ್ಕೆ ಪಳ್ಳಿಯಲ್ಲಿ ಮಣೆ ಹಾಕುವವರ ವಿರುದ್ಧ ಗ್ರಾಮಸ್ಥರು ಈಗ ಸಿಡಿದೆದ್ದಿದ್ದಾರೆ. ಇದು ಕೇವಲ ಪ್ರತಿಭಟನೆಯಲ್ಲ, ಪಳ್ಳಿಯ ಅಸ್ತಿತ್ವದ ಉಳಿವಿಗಾಗಿ ಹೋರಾಟಕ್ಕೆ ಸಜ್ಜಾಗಿದ್ದಾರೆ. ಜನವಸತಿ ಇಲ್ಲದ ನಿರ್ಜನ ಪ್ರದೇಶದಲ್ಲಿ ಇಂಥಾ ಘಟಕಗಳನ್ನು ಸ್ಥಾಪಿಸವಂತೆ ಊರವರು ಪಟ್ಟು ಹಿಡಿದಿದ್ದಾರೆ.

error: Content is protected !!