ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಅಂತರಜಾತಿ ವಿವಾಹ ವಿಚಾರವಾಗಿ ಗಲಾಟೆ ನಡೆದಿದ್ದು, ಸಿನಿಮಾ ಸ್ಟೈಲ್ ನಲ್ಲಿ ಯುವತಿಯನ್ನು ಪೋಷಕರು ಎಳೆದೊಯ್ದ ಘಟನೆ ನಡೆದಿದೆ.

ತಿಳವಳ್ಳಿ ಗ್ರಾಮದ ಯುವಕ ಮಣಿಕಂಠ ಸ್ವಾಮಿ ಮತ್ತು ಕೆಲವೂರು ಕೊಪ್ಪ ಗ್ರಾಮದ ಯುವತಿ ಸೃಷ್ಠಿ ಕಾಲೇಜು ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ದಿನಗಳ ಹಿಂದೆ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾದ ಈ ಜೋಡಿ, ಇಂದು ರಿಜಿಸ್ಟರ್ ಮ್ಯಾರೇಜ್ ಮಾಡಲು ಕಚೇರಿಗೆ ತೆರಳಿದ್ದರು ಎನ್ನಲಾಗಿದೆ.

ಆದರೆ ಈ ವಿಷಯ ತಿಳಿದ ಯುವತಿಯ ಪೋಷಕರು ಕಾರನ್ನು ಬೆನ್ನಟ್ಟಿಕೊಂಡು ಬಂದು ತಿಳವಳ್ಳಿ ಗ್ರಾಮದಲ್ಲಿ ಜೋಡಿಯನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಯುವತಿ ನಿರಾಕರಿಸಿದರೂ ಸಹ, ಬಲವಂತವಾಗಿ ಎಳೆದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಮಣಿಕಂಠ ಸ್ವಾಮಿಗೆ ಹಲ್ಲೆ ನಡೆಸಿದ ಆರೋಪವೂ ಕೇಳಿಬರುತ್ತಿದೆ.

ಅಂತರಜಾತಿ ವಿವಾಹವೇ ಈ ಗಲಾಟೆಗೆ ಕಾರಣ ಎಂದು ಹೇಳಲಾಗುತ್ತಿದ್ದು, ಯುವತಿ ಕುಟುಂಬಸ್ಥರು ಮದುವೆಯನ್ನು ಒಪ್ಪುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆ ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.