ಖಮೇನಿ ಭಾರತದ ಮಿತ್ರನೇ? ಮೋದಿ ಸರ್ಕಾರದ ʻಮೌನ’ಕ್ಕೆ ಅಸಲಿ ಕಾರಣ ಇಲ್ಲಿದೆ!

ನವದೆಹಲಿ: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರ ಇಡೀ ಜಗತ್ತು ಕಂಬನಿ ಮಿಡಿಯುತ್ತಿದ್ದರೆ, ಭಾರತ ಮಾತ್ರ ಮೌನಕ್ಕೆ ಶರಣಾಗಿದೆ. ಈ ಮೌನ ಈಗ ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. “ಭಾರತ ತನ್ನ ರಾಜತಾಂತ್ರಿಕ ಪರಂಪರೆಯನ್ನು ಕೈಬಿಟ್ಟಿದೆ” ಎಂದು ಸೋನಿಯಾ ಗಾಂಧಿ ನೇತೃತ್ವದ ವಿರೋಧ ಪಕ್ಷಗಳು ಮೋದಿ ಸರ್ಕಾರದ ಮೇಲೆ ಮುಗಿಬಿದ್ದಿವೆ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಖಮೇನಿ ನಿಜವಾಗಿಯೂ ಭಾರತದ ಮಿತ್ರನಾಗಿದ್ದನೇ ಎಂಬ ಪ್ರಶ್ನೆ ಎದ್ದೇ ನಿಲ್ಲುತ್ತದೆ.

ಭಾರತದ ಬೆನ್ನಿಗೆ ಇರಿದಿದ್ದರೇ ಖಮೇನಿ?
ಖಮೇನಿ ಅವರು ಹಲವು ಬಾರಿ ಭಾರತದ ಆಂತರಿಕ ವಿಷಯಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಿದ್ದನ್ನು ಇತಿಹಾಸ ನೆನಪಿಸುತ್ತದೆ. ಅವರ ಮೌನಕ್ಕಿಂತ ಅವರ ಮಾತುಗಳೇ ಭಾರತಕ್ಕೆ ಹೆಚ್ಚು ನೋವು ತಂದಿದ್ದವು.
ಕಾಶ್ಮೀರ ವಿಷಯದಲ್ಲಿ ಕಿಚ್ಚು: 2017 ಮತ್ತು 2019 ರಲ್ಲಿ ಭಾರತ ಸರ್ಕಾರ ಕಲಂ 370 ರದ್ದುಗೊಳಿಸಿದಾಗ, ಖಮೇನಿ ಅವರು ಭಾರತದ ವಿರುದ್ಧ ಮುಸ್ಲಿಂ ಜಗತ್ತನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದರು. “ಕಾಶ್ಮೀರದ ದಮನಿತ ಮುಸ್ಲಿಮರ ಪರ ನಿಲ್ಲಿ” ಎಂದು ಅವರು ಕರೆ ನೀಡಿದ್ದು ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು.

CAA ಮತ್ತು ದೆಹಲಿ ಗಲಭೆ: 2020ರ ದೆಹಲಿ ಗಲಭೆಯನ್ನು “ಮುಸ್ಲಿಮರ ನರಮೇಧ” ಎಂದು ಕರೆದಿದ್ದ ಖಮೇನಿ, ಭಾರತವನ್ನು ಇಸ್ಲಾಮಿಕ್ ಜಗತ್ತಿನಿಂದ ಒಂಟಿಯಾಗಿಸುವ ಬೆದರಿಕೆ ಹಾಕಿದ್ದರು. ʻಭಾರತೀಯ ಮುಸ್ಲಿಮರು ಅಪಾಯದಲ್ಲಿದ್ದಾರೆ’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚಿದ್ದರು.

ಖಮೇನಿ ಅವರು ಭಾರತವನ್ನು ಗಾಜಾ ಮತ್ತು ಮ್ಯಾನ್ಮಾರ್‌ಗೆ ಹೋಲಿಸಿದ್ದರು. ಈ ಹೇಳಿಕೆಯನ್ನು ಭಾರತವು “ಅಜ್ಞಾನದ ಪರಮಾವಧಿ ಮತ್ತು ಸ್ವೀಕಾರಾರ್ಹವಲ್ಲದ ಮಾತು” ಎಂದು ಕಟುವಾಗಿ ಖಂಡಿಸಿತ್ತು.

ಮೋದಿ ಸರ್ಕಾರವು ಖಮೇನಿ ಸಾವಿಗೆ ಮೌನವಾಗಿರಲು ಕೇವಲ ಹಳೆಯ ದ್ವೇಷ ಕಾರಣವಲ್ಲ, ಅದರ ಹಿಂದೆ ಬಲಿಷ್ಠವಾದ ರಾಜತಾಂತ್ರಿಕ ಲೆಕ್ಕಾಚಾರವಿದೆ. ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಓಮನ್ ದೇಶಗಳು ಭಾರತದ ಆಪ್ತ ಮಿತ್ರರು. ಈ ದೇಶಗಳಲ್ಲಿ 90 ಲಕ್ಷಕ್ಕೂ ಹೆಚ್ಚು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಇರಾನ್‌ಗಿಂತ ಈ ದೇಶಗಳು ಭಾರತಕ್ಕೆ ಆರ್ಥಿಕವಾಗಿ ಮತ್ತು ರಕ್ಷಣಾತ್ಮಕವಾಗಿ ಹೆಚ್ಚು ಮುಖ್ಯ.

ಇರಾನ್‌ನೊಂದಿಗೆ ಅತಿಯಾದ ಆಪ್ತತೆ ಸಾಧಿಸಿದರೆ ಅರಬ್ ಮಿತ್ರ ರಾಷ್ಟ್ರಗಳು ಮತ್ತು ಅಮೆರಿಕಾದ ಜೊತೆಗಿನ ಸಂಬಂಧ ಹಳಸಬಹುದು ಎಂಬುದು ಸರ್ಕಾರದ ದೂರದೃಷ್ಟಿ. ಅದಕ್ಕಾಗಿಯೇ ಪ್ರಧಾನಿ ಮೋದಿ ಅವರು ಕಳೆದ ಎರಡು ದಿನಗಳಲ್ಲಿ ಅರಬ್ ದೇಶಗಳ ನಾಯಕರೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ.

ಇಸ್ಲಾಮಿಕ್ ಒಕ್ಕೂಟದ (OIC) 57 ದೇಶಗಳಲ್ಲಿ ಕೇವಲ 10 ದೇಶಗಳು ಮಾತ್ರ ಖಮೇನಿ ಸಾವಿಗೆ ಅಧಿಕೃತವಾಗಿ ಸಂತಾಪ ಸೂಚಿಸಿವೆ! ರಷ್ಯಾ, ಚೀನಾ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾದಂತಹ ದೇಶಗಳು ಖಮೇನಿ ಪರ ನಿಂತಿದ್ದರೆ, ಉಳಿದ ಜಗತ್ತು ಇದನ್ನು ಇರಾನ್‌ನ ಆಂತರಿಕ ವಿಷಯ ಮತ್ತು ಇಸ್ರೇಲ್‌ನ ದಾಳಿ ಎಂಬಂತೆ ನೋಡುತ್ತಿದೆ.

error: Content is protected !!