ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ; ಮೀನುಗಾರರಿಂದ ವ್ಯಕ್ತಿಯ ರಕ್ಷಣೆ

ಮಂಗಳೂರು: ನೇತ್ರಾವತಿ ಸೇತುವೆಯ ತಡೆಬೇಲಿ ಅಪಘಾತದಿಂದ ಮುರಿದ ಕೆಲವೇ ದಿನಗಳಲ್ಲಿ ವ್ಯಕ್ತಿಯೋರ್ವರು ಸುಸೈಡ್‌ ಪಾಯಿಂಟ್‌ ಆಗಿ ಗುರುತಿಸಿಕೊಂಡಿದ್ದ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ(ಫೆ.01) ನಡೆದಿದೆ. ಆತನನ್ನು ಮೀನುಗಾರರು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.

‌ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯು ಪಂಪ್‌ ವೆಲ್‌ ನಾಗುರಿ ನಿವಾಸಿ ಎಂದು ತಿಳಿದು ಬಂದಿದೆ. ಕೆಳಗಡೆ ಮೀನುಗಾರಿಕೆಯಲ್ಲಿ ನಿರತರಾಗಿದ್ದ ಮೀನುಗಾರರು ತಕ್ಷಣವೇ ನದಿಗೆ ಹಾರಿ ವ್ಯಕ್ತಿಯನ್ನು ದೋಣಿಗೆ ಎಳೆದು ಬಳಿಕ ಪ್ರಾಥಮಿಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನೇತ್ರಾವತಿ ಸೇತುವೆಗೆ ಅಳವಡಿಸಲಾದ ಬೇಲಿ ವಾಹನವೊಂದರ ಅಪಘಾತದಿಂದ ಮುರಿದು ಹೋಗಿತ್ತು. ಲಕ್ಷಾಂತರ ವ್ಯಯಿಸಿ ನಿರ್ಮಿಸಿದ ತಡೆಬೇಲಿಯನ್ನು ದುರಸ್ತಿಗೆ ಇಲಾಖೆಗಳು ಮುಂದಾಗಲಿಲ್ಲ. ಇದೀಗ ಅಲ್ಲಿಂದಲೇ ವ್ಯಕ್ತಿ ಹಾರಿರುವ ಶಂಕೆಯನ್ನು ಮೀನುಗಾರರು ವ್ಯಕ್ತಪಡಿಸಿದ್ದಾರೆ. ಮೀನುಗಾರರಾದ ಜಮಾಲ್‌, ಇದಿನಬ್ಬ ಮತ್ತು ಮೈಯ್ಯದಿ ಎಂಬುವ ಮೀನುಗಾರರು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.

error: Content is protected !!