‌ ‘ಐ ಲವ್ ಯೂ ಮಮ್ಮಿʼ ಎಂದು ಮೆಸೇಜ್ ಕಳಿಸಿ ನೇಣಿಗೆ ಕೊರಳೊಡ್ಡಿದ ಕೋಮಲಿ

ಹೈದರಾಬಾದ್: ಸೋಶಿಯಲ್ ಮೀಡಿಯಾದಲ್ಲಿ ನಗುವ ಮುಖದ ಮೂಲಕ ಸಾವಿರಾರು ಅಭಿಮಾನಿಗಳ ಮನಗೆದ್ದಿದ್ದ 21 ವರ್ಷದ ಯೂಟ್ಯೂಬರ್ ಕೋಮಲಿ ಬೋನು, ಈಗ ಹೈದರಾಬಾದ್‌ನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಹೆಣವಾಗಿ ಬಿದ್ದಿದ್ದಾಳೆ.

ಮಣಿಕೊಂಡದ ಚಿತ್ರಪುರಿ ಕಾಲೋನಿಯ ತನ್ನ ಬಾಡಿಗೆ ಮನೆಯಲ್ಲಿ ಕೋಮಲಿ ನೇಣಿಗೆ ಶರಣಾಗಿದ್ದು, ಮಲ್ಲರೆಡ್ಡಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಓದುತ್ತಿದ್ದ ಈ ಪ್ರತಿಭಾನ್ವಿತೆ ಇಷ್ಟು ಬೇಗ ಬದುಕು ಮುಗಿಸಿದ್ದು ಇಡೀ ಚಿತ್ರರಂಗ ಹಾಗೂ ಸೋಶಿಯಲ್ ಮೀಡಿಯಾ ಲೋಕವನ್ನು ಬೆಚ್ಚಿಬೀಳಿಸಿದೆ.

ತಾಯಿಗೆ ಕಳಿಸಿದ ಕೊನೆಯ ಸಂದೇಶ:
ಸೋಮವಾರ ಬೆಳಗ್ಗೆ ಕೋಮಲಿ ತನ್ನ ತಾಯಿ ಸತ್ಯ ವರಲಕ್ಷ್ಮಿಗೆ ಮೊಬೈಲ್‌ನಲ್ಲಿ ಒಂದು ಸಂದೇಶ ಕಳಿಸಿದ್ದಳು. “ಐ ಲವ್ ಯೂ ಸೋ ಮಚ್ ಅಮ್ಮ, ತಮ್ಮನನ್ನು ಚೆನ್ನಾಗಿ ನೋಡಿಕೋ” ಎನ್ನುವ ಆ ಒಂದು ಸಾಲು ಕೋಮಲಿ ಪಾಲಿನ ಕೊನೆಯದಾಯಿತು. ಆ ಮೆಸೇಜ್ ಕಳಿಸಿದ ಬೆನ್ನಲ್ಲೇ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ. ಗಾಬರಿಯಾದ ತಾಯಿ ಸ್ನೇಹಿತರಿಗೆ ಮಾಹಿತಿ ನೀಡಿ ಮನೆಗೆ ಹೋಗುವಂತೆ ಕೇಳಿಕೊಂಡಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪೊಲೀಸರು ಬಾಗಿಲು ಮುರಿದು ಒಳಹೋದಾಗ ಕೋಮಲಿಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಮಾಡೆಲಿಂಗ್ ಮತ್ತು ವ್ಲಾಗ್‌ಗಳ ಮೂಲಕ ಫೇಮಸ್ ಆಗಿದ್ದ ಕೋಮಲಿ, ಅಖಿಲ್ ರೆಡ್ಡಿ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಯೂಟ್ಯೂಬರ್ ಜೊತೆ ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದಳು ಎನ್ನಲಾಗುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಫಾಲೋವರ್ಸ್ ಹೊಂದಿದ್ದ ಈ ಸುಂದರಿ, ತನ್ನ ವೈಯಕ್ತಿಕ ನೋವನ್ನು ಯಾರಿಗೂ ತೋರ್ಪಡಿಸದೆ ಅಂತಿಮವಾಗಿ ಸಾವಿನ ಮನೆಯ ಕದ ತಟ್ಟಿದ್ದಾಳೆ.

error: Content is protected !!