ಮಂಗಳೂರಲ್ಲಿ ಫೆ. 26ರಿಂದ ನಾಲ್ಕು ದಿನಗಳ ‘ಬೃಹತ್ ಬೈಬಲ್ ಅಧಿವೇಶನ-2026’

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಕಾರ್ಮ್ಯಾಟಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಬೈಬಲ್ ಆಯೋಗದ ಸಂಯುಕ್ತ ಆಶ್ರಯದಲ್ಲಿ 2026ರ ಫೆಬ್ರವರಿ 26 ರಿಂದ ಮಾರ್ಚ್ 01 ರವರೆಗೆ ನಾಲ್ಕು ದಿನಗಳ ಕಾಲ ಮಂಗಳೂರಿನ ಕುಲಶೇಖರದ ಕೋಡೆಲ್ ಹೋಲಿ ಕ್ರಾಸ್ ಚರ್ಚಿನ ಬಯಲು ಮೈದಾನದಲ್ಲಿ ಬೃಹತ್ ಬೈಬಲ್ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಧರ್ಮಗುರು ಮ್ಯಾಕ್ಸಿಮ್ ನೊರೋನ್ಹಾ ಮಾಹಿತಿ ನೀಡಿದರು.

ಮಂಗಳೂರಿನ ಬಿಷಪ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, 2026ನೇ ಸಾಲಿನ ʻದೇವರ ವಾಕ್ಯದ ಭಾನುವಾರ’ದ ಆಚರಣೆಯ ಪ್ರಯುಕ್ತ, “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲಸಿದೆ” ಎಂಬ ಶೀರ್ಷಿಕೆಯನ್ನು ಈ ಅಧಿವೇಶನಕ್ಕೆ ಪ್ರಮುಖವಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಪ್ರತಿದಿನ ಸಂಜೆ 4:00 ರಿಂದ 8:30 ರವರೆಗೆ ಕಾರ್ಯಕ್ರಮಗಳು ಜರುಗಲಿವೆ. ನಮ್ಮ ನಡುವೆ ನೆಲಸಿರುವ ದೇವರ ವಾಕ್ಯವನ್ನು ಆಚರಿಸುವುದು, ಸಂಭ್ರಮಿಸುವುದು ಮತ್ತು ಬೈಬಲ್ ನೀಡುವ ಸ್ಫೂರ್ತಿಯನ್ನು ಜನರ ಮಧ್ಯದಲ್ಲಿ ಪ್ರಚುರಪಡಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಅಧಿವೇಶನದ ಪ್ರತಿ ದಿನವೂ ಪವಿತ್ರ ಬಲಿಪೂಜೆ, ಪವಿತ್ರ ಜಪಮಾಲೆಯ ಧ್ಯಾನ ಮತ್ತು ದಿವ್ಯ ಸಂಸ್ಕಾರದ ಆರಾಧನೆಗಳು ನಡೆಯಲಿದ್ದು, ಬೈಬಲ್‌ನ ಹಳೆಯ ಮತ್ತು ಹೊಸ ಒಡಂಬಡಿಕೆಗಳ ಆಧಾರಿತ ಆಳವಾದ ಪ್ರವಚನಗಳನ್ನು ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಲಾಗುವುದು. ಈ ಧರ್ಮಸಮ್ಮೇಳನದಲ್ಲಿ ಎಂಟು ಮಂದಿ ಧರ್ಮಗುರುಗಳು ದೇವರ ವಾಕ್ಯವನ್ನು ಬೋಧಿಸಲಿದ್ದು, ನಾಲ್ವರು ಧರ್ಮಗುರುಗಳು ಬೈಬಲ್ ಆಧಾರಿತ ಆರಾಧನೆಯ ನೇತೃತ್ವ ವಹಿಸಲಿದ್ದಾರೆ. ಇದರೊಂದಿಗೆ ಭಕ್ತಾದಿಗಳಿಗಾಗಿ ಗುಣಪಡಿಸುವ ಪ್ರಾರ್ಥನೆಗಳು ಹಾಗೂ ಭಕ್ತಿಪೂರ್ವಕ ಗಾಯನಗಳು ಅಧಿವೇಶನದ ಭಾಗವಾಗಿರಲಿವೆ. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಆಶೀರ್ವಾದ ಪಡೆಯಬೇಕೆಂದು ಮ್ಯಾಕ್ಸಿಮ್ ನೊರೋನ್ಹಾ ಅವರು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಧರ್ಮಸಮ್ಮೇಳನದ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು. ಅಲ್ಲದೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಧರ್ಮಗುರುಗಳಾದ ಜೆ.ಬಿ. ಸಾಲ್ದಾನಾ, ರಾಯ್ ಕ್ಯಾಸ್ತಲಿನೋ, ವಿನ್ಸೆಂಟ್ ಸಿಕ್ವೆರಾ, ಎಲಯಸ್ ಫೆರ್ನಾಂಡಿಸ್ ಹಾಗೂ ಡಾಲ್ಫಿ ಲೋಬೋ ಉಪಸ್ಥಿತರಿದ್ದರು.

error: Content is protected !!