ಬಂಟ್ವಾಳ: ತಾಲೂಕಿನ ಕೊಡ್ಮಾಣು ಗ್ರಾಮದ ಪಕ್ಕಳಪಾದೆ ಎಂಬಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೇರಮಜಲು ನಿವಾಸಿ ಪ್ರಶಾಂತ್ ಅಲಿಯಾಸ್ ಪ್ರಸಾದ್ (30) ಎಂಬಾತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 19ರಂದು ಮಧ್ಯಾಹ್ನ ಸಮಯ, ಪಕ್ಕಳಪಾದೆಯ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಲಾಭ ಗಳಿಸುವ ಉದ್ದೇಶದಿಂದ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.
ಈ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಂಜುನಾಥ ಟಿ. ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ದಾಳಿ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ತಪಾಸಣೆಯ ವೇಳೆ ಆತನ ಬಳಿ ಇದ್ದ 180 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಚಾರಣೆಯ ವೇಳೆ ತನಗೆ ಈ ಗಾಂಜಾವನ್ನು ಬಂಟ್ವಾಳದ ಪಲ್ಲಮಜಲು ನಿವಾಸಿ ಅಬ್ದುಲ್ ರಜಾಕ್ ಎಂಬುವವರು ಗಿರಾಕಿಗಳಿಗೆ ಮಾರಾಟ ಮಾಡುವಂತೆ ತಿಳಿಸಿ ಕೊಟ್ಟಿರುವುದಾಗಿ ಆರೋಪಿ ಬಾಯಿಬಿಟ್ಟಿದ್ದಾನೆ. ಸದ್ಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
