33 ಹಸುಗೂಸುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ದಂಪತಿಗೆ ಮರಣದಂಡನೆ!

ಲಕ್ನೋ: ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಆ ಮನೆಯಲ್ಲಿ ವಾಸವಿದ್ದದ್ದು ಮನುಷ್ಯರಲ್ಲ, ಹಸುಗೂಸುಗಳ ಬಾಲ್ಯವನ್ನು ಹಸಿಹಸಿಯಾಗಿ ತಿನ್ನಲು ಹಪಹಪಿಸುತ್ತಿದ್ದ ಎರಡು ನರಮೃಗಗಳು! ರಾಮಭವನ್ ಮತ್ತು ದುರ್ಗಾವತಿ – ಈ ದಂಪತಿ ಮಾಡಿದ್ದು ಕೇವಲ ಅಪರಾಧವಷ್ಟೇ ಅಲ್ಲ ಅದು ದೈವತ್ವದಂತಿರುವ ಬಾಲ್ಯದ ಮೇಲೆ ನಡೆಸಿದ ಮಾರಕ ದಾಳಿ.

ಇವರು ಆಟವಾಡುವ ವಯಸ್ಸಿನಲ್ಲಿ, ಪ್ರೀತಿಯ ಅಪ್ಪುಗೆ ಬೇಕಿದ್ದ ಆ ಕಂದಮ್ಮಗಳ ಮೇಲೆ ಕಾಮದ ಉನ್ಮತ್ತ ರಾಕ್ಷಸರಂತೆ ಮುಗಿಬಿದ್ದಿದ್ದಾರೆ. 33 ಮಕ್ಕಳ ಮೇಲೆ ಮೃಗೀಯವಾಗಿ ಲೈಂಗಿಕ ದೌರ್ಜನ್ಯವೆಸಗಿ, ಅವರ ದೇಹ ಮತ್ತು ಮನಸ್ಸಿನ ಮೇಲೆ ಮರಣಾಂತಿಕ ಗಾಯಗಳನ್ನು ಮಾಡಿದ ಈ ಜೋಡಿಯ ವಿಕೃತಿಗೆ ಪಾರವೇ ಇಲ್ಲ. ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಆ ವರದಿಯಲ್ಲಿನ ವಿವರಗಳು ಎಂತಹ ಗಟ್ಟಿ ಗುಂಡಿಗೆಯವರನ್ನೂ ಬೆಚ್ಚಿಬೀಳಿಸುವಂತಿದ್ದವು.

ಆ ಪುಟಾಣಿಗಳ ಖಾಸಗಿ ಭಾಗಗಳ ಮೇಲೆ ಗಾಯಗಳು ಮೂಡಿದ್ದವು. ಅವು ಅನುಭವಿಸಿದ ದೈಹಿಕ ಯಾತನೆ ಎಷ್ಟಿತ್ತೆಂದರೆ, ಕೆಲವು ಮಕ್ಕಳು ವರ್ಷಗಟ್ಟಲೆ ಆಸ್ಪತ್ರೆಯ ಬೆಡ್ ಮೇಲೆ ಬಿದ್ದು ನರಳಾಡಬೇಕಾಯಿತು. ಹೆಂಡತಿಯೇ ಗಂಡನಿಗೆ ಈ ಎಲ್ಲ ಅಸಹ್ಯ ಕೃತ್ಯಗಳಿಗೆ ಸಾಥ್ ನೀಡುತ್ತಿದ್ದಳು ಎನ್ನುವುದು ತನಿಖೆಯಿಂದ ಬಯಲಾಗಿದೆ.

ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣವನ್ನು “ಅನಾಗರಿಕತೆಯ ಪರಮಾವಧಿ” ಎಂದು ಕರೆದಿದ್ದಾರೆ. ಆ 33 ಮಕ್ಕಳ ಬಾಲ್ಯವನ್ನು ಜೀವಂತವಾಗಿ ಹೊಸಕಿ ಹಾಕಿದ ಈ ದಂಪತಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ ಎಂದು ತೀರ್ಪು ನೀಡಿದ್ದಾರೆ.

ಅಷ್ಟೇ ಅಲ್ಲ, ನೊಂದ ಪ್ರತಿಯೊಂದು ಮಗುವಿಗೂ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ವಿಶೇಷವೆಂದರೆ, ಈ ಪಾಪಿಗಳ ಮನೆಯಲ್ಲಿ ಸಿಕ್ಕ ಪ್ರತಿಯೊಂದು ರೂಪಾಯಿಯೂ ಆ ಕಂದಮ್ಮಗಳ ಪಾಲಾಗಬೇಕು ಎಂದು ನ್ಯಾಯಾಲಯ ಖಡಕ್ ಆಗಿ ಹೇಳಿದೆ.

 

error: Content is protected !!