ಹೆತ್ತವರ ಕಣ್ಣು ತಪ್ಪಿಸಿ ಮದುವೆಯಾಗಲು ಹೊರಟ ಪ್ರೇಮಿಗಳ ಕಾರು ಪಲ್ಟಿ; ಮೂವರು ಗಂಭೀರ ಗಾಯ, ಯುವತಿ ಪರಾರಿ

ಹಾವೇರಿ: ಪ್ರೀತಿ ಮಾಡುತ್ತಿದ್ದ ಜೋಡಿಗೆ ಮದುವೆ ಮಾಡಿಸಲು ಬಂದ ವೇಳೆ ಕಾರು ಸ್ಕಿಡ್‌ ಆಗಿ ಪಲ್ಟಿ ಹೊಡೆದ ಪರಿಣಾಮ ಮೂವರು ಗಾಯಗೊಂಡು, ಯುವತಿ ಪರಾರಿಯಾದ ಘಟನೆ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ಗ್ರಾಮದ ಬಳಿ ನಡೆದಿದೆ.

ಗಾಯಗೊಂಡ ಇರ್ಫಾನ್‌, ಚಂದ್ರಕಾಂತ್‌ ಮತ್ತು ಗುರುರಾಜ್‌ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹುಡುಗಿ ಬೆಂಗಳೂರಿಗೆ ಪರಾರಿಯಾಗಿದ್ದು, ಹುಡುಗ ಮತ್ತು ಸ್ನೇಹಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಹಿರೇಕೆರೂರು ತಾಲೂಕಿನ ಯುವತಿ ಹಾಗೂ ಇರ್ಫಾನ್‌ ಪ್ರೀತಿಸುತ್ತಿದ್ದರು. ಯುವತಿ ಹಾಗೂ ಇರ್ಫಾನ್‌ ಇಬ್ಬರು ತಮ್ಮ ಪೋಷಕರ ಕಣ್ಣು ತಪ್ಪಿಸಿ ಮದುವೆಯಾಗುವ ಯೋಚನೆಯಲ್ಲಿದ್ದರು. ಹೀಗಾಗಿ ಕೆಲ ದಿನಗಳ ಹಿಂದಷ್ಟೇ ಯುವತಿ ಜಾತ್ರೆಗೆಂದು ಊರಿಗೆ ಬಂದಿದ್ದಳು.

ಈ ವೇಳೆ ಯುವತಿಯನ್ನು ಕರೆದುಕೊಂಡು ಹೋಗಿ ಮದುವೆ ಆಗುವ ತಯಾರಿಯಲ್ಲಿದ್ದ ಇರ್ಫಾನ್‌ ಇದಕ್ಕಾಗಿ ಸ್ನೇಹಿತರ ಜತೆಗೆ ಹಿರೇಕೆರೂರು ತಾಲೂಕಿಗೆ ಬಂದಿದ್ದ. ಇರ್ಫಾನ್‌ಗೆ ಗೆಳೆಯರಾದ ಗುರುರಾಜ್‌ ಹಾಗೂ ಚಂದ್ರಕಾಂತ್‌ ಸಾಥ್‌ ಕೊಟ್ಟಿದ್ದು, ಯುವತಿಯನ್ನು ಕಾರಿನಲ್ಲಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರು. ಅಲ್ಲದೇ ಯುವತಿ ಪೋಷಕರು ಹುಡುತ್ತ ಬರಬಹುದು ಎಂಬ ಭಯದಲ್ಲಿ ಕಾರು ಚಲಾಯಿಸಿದ್ದ ವೇಳೆ ಚನ್ನಹಳ್ಳಿ ತಾಂಡಾದ ಬಳಿ ಕಾರು ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದೆ.

ಕಾರು ಪಲ್ಟಿಯಾದ ವೇಳೆ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಯುವತಿ ಸ್ವಲ್ಪದರಲ್ಲಿಯೇ ಪ್ರಾಣಾಯಾಮದಿಂದ ಪಾರಾಗಿದ್ದಾಳೆ. ಊರ ಬಳಿಯೇ ಕಾರು ಪಲ್ಟಿಯಾದ ಕಾರಣ ಯುವಕರ ರಕ್ಷಣೆಗಾಗಿ ಜನ ಸೇರಿದ್ದಾರೆ. ಈ ವೇಳೆ ಮರ್ಯಾದೆಗೆ ಅಂಜಿ ಯುವತಿ ಅವರಿವರ ಬಳಿ ಡ್ರಾಪ್‌ ಪಡೆದು ಬೆಂಗಳೂರು ಬಸ್‌ ಹತ್ತಿದ್ದಾಳೆ. ಸದ್ಯ ಬೆಂಗಳೂರು ತಲುಪಿದ್ದು ಮನೆ ಸೇರಿದ್ದಾಳೆ.

ಹಿರೇಕೆರೂರು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

error: Content is protected !!