ಗ್ರೆನೇಡ್ ಗ್ಯಾಂಗ್‌ನ ಶಂಕಿತ ಉಗ್ರ ಅರ್ಷದ್ ಖಾನ್‌ಗೆ ಬಿತ್ತು ಪೊಲೀಸ್‌ ಬೇಡಿ!

ಬೆಂಗಳೂರು: ನಗರದ ಆರ್‌.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಎನ್‌ಐಎ (NIA) ಮತ್ತು ಸಿಸಿಬಿ ಪೊಲೀಸರು, 2023ರ ಗ್ರೆನೇಡ್ ಪತ್ತೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ಅರ್ಷದ್‌ ಖಾನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2023ರಲ್ಲಿ ಬೆಂಗಳೂರಿನಲ್ಲಿ ಗ್ರೆನೇಡ್‌ಗಳು ಪತ್ತೆಯಾದಾಗ ಇಡೀ ರಾಜ್ಯ ಬೆಚ್ಚಿಬಿದ್ದಿತ್ತು. ಈ ವಿಧ್ವಂಸಕ ಸಂಚಿನ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಅರ್ಷದ್‌ ಖಾನ್‌ನನ್ನು ಬಂಧಿಸಿದ್ದರು. ಆದರೆ, ನಂತರ ಈತ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ. ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವರ್ಗಾಯಿಸಲಾಗಿತ್ತು.

ಜಾಮೀನಿನ ಮೇಲೆ ಹೊರಬಂದಿದ್ದ ಅರ್ಷದ್ ಖಾನ್, ಎನ್‌ಐಎ ತನಿಖೆಗೆ ಸಹಕರಿಸದೆ ಮತ್ತು ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗದೆ ಪರಾರಿಯಾಗಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನನ್ನು ‘ಘೋಷಿತ ಅಪರಾಧಿ’ (Proclaimed Offender) ಎಂದು ಘೋಷಿಸಿ ಪ್ರೊಕ್ಲೋಮೇಷನ್ ಜಾರಿ ಮಾಡಿತ್ತು. ದೀರ್ಘಕಾಲದ ಹುಡುಕಾಟದ ನಂತರ ಈಗ ಆರ್‌.ಟಿ. ನಗರದಲ್ಲಿ ಈತನನ್ನು ಮತ್ತೆ ಹೆಡೆಮುರಿ ಕಟ್ಟಲಾಗಿದೆ.

ಮೋಸ್ಟ್ ವಾಂಟೆಡ್ ಜುನೈದ್‌ನ ʻಖಾಸಾ ದೋಸ್ತ್’
ಬಂಧಿತ ಅರ್ಷದ್ ಖಾನ್ ಕೇವಲ ಆರೋಪಿಯಲ್ಲ, ಈತ ವಿದೇಶದಲ್ಲಿ ಅಡಗಿ ಕುಳಿತಿರುವ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಮತ್ತು ಕುಕ್ಕರ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಜುನೈದ್ ಅಹ್ಮದ್‌ನ ಅತ್ಯಂತ ಆಪ್ತ ಸ್ನೇಹಿತ. ಜುನೈದ್ ಅಹ್ಮದ್ ಸದ್ಯ ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದು, ಅಲ್ಲಿಂದಲೇ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳಿಗೆ ಯೋಜನೆ ರೂಪಿಸುತ್ತಿದ್ದಾನೆ. ಬಂಧಿತ ಅರ್ಷದ್ ಜುನೈದ್‌ನ ಸ್ಥಳೀಯ ಸಂಪರ್ಕವಾಗಿ ಮತ್ತು ವಿಧ್ವಂಸಕ ಸಂಚುಗಳನ್ನು ಕಾರ್ಯಗತಗೊಳಿಸಲು ಈತ ಸಹಕರಿಸುತ್ತಿದ್ದ ಎನ್ನಲಾಗಿದೆ.

error: Content is protected !!