ಮಂಗಳೂರು: ನಗರದ ಹೊರವಲಯದ ಇತಿಹಾಸ ಪ್ರಸಿದ್ಧ ಮರೋಳಿ ಗ್ರಾಮದ ಅಲಂಗಾರು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಜ್ವಾಲಾ ಮಹಮ್ಮಾಯಿ – ಕಾಲಭೈರವ ದೇವರ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವವು ಫೆಬ್ರವರಿ 21ರಿಂದ 22 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶರತ್ ಕುಮಾರ್ ಅಲಂಗಾರ್ ತಿಳಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರೋಳಿ ಗ್ರಾಮವು ಪುರಾತನ ಕಾಲದಲ್ಲಿ ಋಷಿಮುನಿಗಳ ಹಾಗೂ ಶೈವ ಅನುಯಾಯಿಗಳ ತಪೋಭೂಮಿಯಾಗಿತ್ತು. ಕಾಲಕ್ರಮೇಣ ಇಲ್ಲಿನ ಆರಾಧನೆಗಳು ಸ್ಥಗಿತಗೊಂಡಿದ್ದವು. ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದ ಜನರಲ್ಲಿ ಕಂಡುಬಂದ ಕಷ್ಟ-ಕಾರ್ಪಣ್ಯ ಹಾಗೂ ದೋಷಗಳ ನಿವಾರಣೆಗಾಗಿ ಜ್ಯೋತಿಷ್ಯ ಶಶಿಕುಮಾರ ಪಂಡಿತರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಈ ನೆಲದಲ್ಲಿ ಅಗ್ನಿ ಮುಖೇನ ಉಪಾಸಿಸಲ್ಪಡುತ್ತಿದ್ದ ಶ್ರೀ ಜ್ವಾಲಾ ಮಹಮ್ಮಾಯಿ, ಕಾಲಭೈರವ ಹಾಗೂ ಪರಿವಾರ ದೈವಗಳ ಸಾನಿಧ್ಯವಿರುವುದು ದೃಢಪಟ್ಟಿತ್ತು ಎಂದರು.
75 ಲಕ್ಷ ವೆಚ್ಚದಲ್ಲಿ ದೇಗುಲ ನಿರ್ಮಾಣ:
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ದೋಷಗಳ ಪರಿಹಾರಾರ್ಥವಾಗಿ ಕಳೆದ ಡಿಸೆಂಬರ್ 14 ರಂದು ಅವಘಡ್ ಪೀರ್ ರಾಜೇಶ್‌ನಾಥ್ ಗುರೂಜಿ ಹಾಗೂ ಅಘೋರಿಬಾಬಾ ಅವರ ಮಾರ್ಗದರ್ಶನದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಕೇವಲ ಎರಡು ತಿಂಗಳ ಅವಧಿಯಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಈ ಸುಂದರ ದೇಗುಲವನ್ನು ಪೂರ್ಣಗೊಳಿಸಲಾಗಿದೆ.
ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಕದ್ರಿ ಯೋಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ 1008 ರಾಜ ಯೋಗಿ ನಿರ್ಮಲ್‌ನಾಥ್ ಜೀ ಅವರ ಶುಭಾಶೀರ್ವಾದದೊಂದಿಗೆ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ವಿಜಯಪುರದ ಅಘೋರಿಬಾಬಾ ಗುರೂಜಿ ಹಾಗೂ ಮರ್ಕಂಜದ ಶ್ರೀ ಅವಘಡ್ ಪೀರ್ ರಾಜೇಶ್‌ನಾಥ್ ಗುರೂಜಿ ಅವರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ಡಿ. ವೇದವ್ಯಾಸ್ ಕಾಮತ್, ವೇದಮೂರ್ತಿ ಡಾ. ಶ್ರೀನಿವಾಸ್ ಜಿ. ಭಟ್, ಕೆ.ಪಿ. ಶೆಟ್ಟಿ ಮೊಡಂಕಾಪು ಗುತ್ತು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ವಾಸುದೇವ ಮರೋಳಿ, ಜೊತೆ ಕಾರ್ಯದರ್ಶಿ ನಮಿತ ರಾಕೇಶ್, ಪ್ರಚಾರ ಸಮಿತಿ ಸದಸ್ಯರಾದ ಸತೀಶ್ ಡಿ., ಪ್ರಕಾಶ್ ಕೋಟ್ಯಾನ್, ನವೀನ್ ಹಾಗೂ ರೋಹಿತ್ ಮರೋಳಿ ಉಪಸ್ಥಿತರಿದ್ದರು.