ಬೆಂಗಳೂರು: ವಿಧಾನಸೌಧದ ಕಾರಿಡಾರ್‌ಗಳಲ್ಲಿ ಈಗ ಹಬ್ಬಿರುವುದು ಬರೀ ಮಲ್ಲಿಗೆ ಹೂವಿನ ಪರಿಮಳವಲ್ಲ, ಬದಲಿಗೆ ಅಧಿಕಾರಕ್ಕಾಗಿ ನಡೆಯುತ್ತಿರುವ ಒಳಸಂಚಿನ ಕಮಟು ವಾಸನೆ! ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಈ ಹಗ್ಗಜಗ್ಗಾಟ ಇದೆಯಲ್ಲ, ಇದು ಈಗ ಹೊಸ ತಿರುವು ಪಡಕೊಂಡಿದೆ. ಬಂಡೆ ತಣ್ಣಗಾಗಿದೆ ಅಂತ ಅಂದುಕೊಳ್ಳುವಾಗಲೇ ಡಿ.ಕೆ.ಶಿವಕುಮಾರ್ ಈಗ ಒಂದು ‘ಗೂಗ್ಲಿ’ ಎಸೆದಿದ್ದಾರೆ. ಆ ಚೆಂಡು ಈಗ ಹೋಗಿ ಬಿದ್ದಿರುವುದು ಸೀದಾ ಸಿದ್ದರಾಮಯ್ಯನವರ ಅಂಗಳಕ್ಕೆ!

ನೋಡಿ ಡಿಕೆಶಿಯ ಈ ಚಾಣಾಕ್ಷ ನಡೆ..
ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯನವರ ಪರಮಾಪ್ತ ಮಹದೇವಪ್ಪ “ನಾಯಿ ಬಾಲ ಅಲ್ಲಾಡಿಸಬಾರದು” ಅಂತ ಮಾರ್ಮಿಕವಾಗಿ ಚುಚ್ಚಿದ್ದರು. ಸದ್ದಿಲ್ಲದೆ ಅರಗಿಸಿಕೊಳ್ಳಲಿಕ್ಕೆ ಡಿಕೆಶಿ ಏನೂ ಸೋಮಾರಿ ರಾಜಕಾರಣಿಯಲ್ಲ. “ಮಹದೇವಪ್ಪನಿಗೆ ನಾನು ಉತ್ತರ ಕೊಡಲ್ಲ, ಆದ್ರೆ ಸಿದ್ದರಾಮಯ್ಯನವರೇ ಸಮಯ ಬಂದಾಗ ಎಲ್ಲವನ್ನೂ ಹೇಳ್ತಾರೆ” ಎಂದು ಹೇಳುವ ಮೂಲಕ ಡಿಕೆಶಿ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅಂದ್ರೆ, “ನಮ್ಮಿಬ್ಬರ ನಡುವೆ ಏನೋ ವ್ಯವಹಾರ ಆಗಿದೆ, ಆ ಗುಟ್ಟು ಸಿದ್ದರಾಮಯ್ಯನವರಿಗೆ ಗೊತ್ತು, ಅವರೇ ಬಾಯಿ ಬಿಡ್ಲಿ” ಅನ್ನೋದು ಕನಕಪುರ ಬಂಡೆಯ ಲೆಕ್ಕಾಚಾರ!

ಇತ್ತ ಶಾಸಕರ ‘ಫಾರಿನ್ ಟೂರ್’ ಹೈಡ್ರಾಮಾ!
ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷನಿಗೆ ಗೊತ್ತಿಲ್ಲದ ಹಾಗೆ ಶಾಸಕರುಗಳೆಲ್ಲ ವಿಮಾನ ಹತ್ತಲು ರೆಡಿಯಾಗಿದ್ದಾರೆ. “ಯಾರು ಸ್ಪಾನ್ಸರ್ ಮಾಡ್ತಿದ್ದಾರೋ ನನಗಂತೂ ಗೊತ್ತಿಲ್ಲ” ಅಂತ ಡಿಕೆಶಿ ಕೊಟ್ಟಿರೋ ಟಾಂಗ್ ಇದೆಯಲ್ಲ, ಅದು ಹೈಕಮಾಂಡ್‌ಗೆ ಮುಟ್ಟಬೇಕಾದ ಕಡೆಗೆ ಮುಟ್ಟಿದೆ. ಹೋಗುವವರು ಉಂಟು, ಕಳಿಸುವವರು ಉಂಟು ಅನ್ನೋ ಅವರ ಮಾತಿನ ಹಿಂದೆ ಒಂದು ದೊಡ್ಡ ‘ಸಸ್ಪೆನ್ಸ್’ ಅಡಗಿದೆ. ಅಧ್ಯಕ್ಷನಿಗೇ ಗೊತ್ತಿಲ್ಲದೆ ನಡೆಯುತ್ತಿರುವ ಈ ವಿದೇಶಿ ಪ್ರವಾಸದ ಹಿಂದೆ ಯಾರ ಕೈವಾಡವಿದೆ? ಅಧಿಕಾರ ಉಳಿಸಿಕೊಳ್ಳೋಕೆ ನಡೀತಿರೋ ಸರ್ಕಸ್ಸಾ ಇದು?

ಒಟ್ಟಿನಲ್ಲಿ ಸಿದ್ದರಾಮಯ್ಯನವರ ಮೌನ ಮತ್ತು ಡಿಕೆಶಿಯ ಈ ‘ಟೈಮ್ ಬಂದಾಗ ಹೇಳ್ತಾರೆ’ ಅನ್ನೋ ಮಾತುಗಳು ಕಾಂಗ್ರೆಸ್ ಕೋಟೆಯೊಳಗೆ ಯಾವ ಬಿರುಗಾಳಿ ಎಬ್ಬಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು. ಯಾಕಂದ್ರೆ ರಾಜಕಾರಣದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳಲ್ಲ. ಇಲ್ಲಿ ಕುರ್ಚಿ ಮಾತ್ರ ಶಾಶ್ವತ!