ಅದು 2002ರ ಫೆಬ್ರವರಿ ತಿಂಗಳು. ತೆಲುಗು ಬೆಳ್ಳಿಪರದೆಯ ಮೇಲೆ ಮಿಂಚಿನಂತೆ ಓಡಾಡುತ್ತಿದ್ದ ಹುಡುಗಿ ಪ್ರತ್ಯುಷ. ‘ಸ್ನೇಹಮಂಟೆ ಇದೆರ’, ‘ಕಲಸುಕೋವಾಲನಿ’ ಅಂತಹ ಸಿನಿಮಾಗಳ ಮೂಲಕ ಸ್ಟಾರ್ ನಟಿಯಾಗಿ ಬೆಳೆಯುತ್ತಿದ್ದ ಆ ಚೆಲುವೆ, ಹಠಾತ್ತನೆ ಹೆಣವಾಗಿ ಬಿದ್ದಾಗ ಇಡೀ ಆಂಧ್ರಪ್ರದೇಶವೇ ಬೆಚ್ಚಿಬಿದ್ದಿತ್ತು. ಅದು ಆತ್ಮಹತ್ಯೆಯೋ? ಕೊಲೆಯೋ? ಅಥವಾ ಪ್ರೀತಿಗಾಗಿ ಮಾಡಿದ ಬಲಿದಾನವೋ? ಉತ್ತರ ಸಿಗದ ನೂರಾರು ಪ್ರಶ್ನೆಗಳ ನಡುವೆ ಅಂದು ಆ ಕೇಸು ಧೂಳು ಹಿಡಿಯುತ್ತಾ ಬಂದಿತ್ತು.

ಅವರಿಬ್ಬರ ಹುಚ್ಚು ಪ್ರೀತಿ
ಪ್ರತ್ಯುಷ ಮತ್ತು ಸಿದ್ಧಾರ್ಥ್ ರೆಡ್ಡಿ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸಿದ್ಧಾರ್ಥ್ ಮನೆಯವರ ವಿರೋಧವಿತ್ತು ಅನ್ನೋದು ಒಂದು ಸಬೂಬು. ಇಬ್ಬರೂ ವಿಷ ಬೆರೆಸಿದ ಕೂಲ್ಡ್ರಿಂಕ್ಸ್ ಕುಡಿದು ಆತ್ಮಹತ್ಯೆಗೆ ಮುಂದಾದರು, ಪ್ರತ್ಯುಷ ಸತ್ತಳು, ಆದರೆ ಸಿದ್ಧಾರ್ಥ್ ಮಾತ್ರ ಪವಾಡ ಸದೃಶ್ಯ ಎಂಬಂತೆ ಬದುಕಿ ಬಂದಿದ್ದ! “ನಾವಿಬ್ಬರೂ ಪ್ರೀತಿಗಾಗಿ ಜೀವ ಬಿಡಲು ನಿರ್ಧರಿಸಿದ್ದೆವು” ಅಂತ ಈತ ಜಗತ್ತಿನ ಮುಂದೆ ಕಣ್ಣೀರು ಹಾಕಿದ್ದ.
ಆದರೆ ಒಬ್ಬ ತಾಯಿಯ ಮನಸ್ಸಿಗೆ ಮಾತ್ರ ಇದು ಆತ್ಮಹತ್ಯೆ ಅಂತ ಅನ್ನಿಸಲೇ ಇಲ್ಲ. ಮಗಳಿಗೆ ‘ಜಯಂ’ ಸಿನಿಮಾದಂತಹ ದೊಡ್ಡ ಅವಕಾಶ ಸಿಕ್ಕಿತ್ತು, ಪಾರ್ಲರ್‌ಗೆ ಹೋಗಿದ್ದವಳು ಕೆಲವೇ ನಿಮಿಷಗಳಲ್ಲಿ ಬರುತ್ತೇನೆ ಅಂದವಳು ವಿಷ ಕುಡಿಯಲು ಹೇಗೆ ಸಾಧ್ಯ? ಈ ಅನುಮಾನಗಳ ಬೆನ್ನತ್ತಿದ ಪ್ರತ್ಯುಷ ತಾಯಿ ಸರೋಜಿನಿ ಕಳೆದ 24 ವರ್ಷಗಳಿಂದ ನ್ಯಾಯಾಲಯಗಳ ಕತ್ತಲ ಕೋಣೆಯಲ್ಲಿ ಒಂಟಿಯಾಗಿ ಹೋರಾಟ ಮಾಡಿದರು.

ಈಗ ಕಾಲದ ಚಕ್ರ ತಿರುಗಿದೆ..
24 ವರ್ಷಗಳ ಸುದೀರ್ಘ ಕಾನೂನು ಸಮರದ ನಂತರ ಈಗ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿದೆ. ಸಿದ್ಧಾರ್ಥ್ ರೆಡ್ಡಿ ಹಾಕಿದ್ದ ಪ್ರೇಮದ ಮುಖವಾಡವನ್ನು ಸುಪ್ರೀಂಕೋರ್ಟ್ ಕಿತ್ತೆಸೆದಿದೆ. ಪ್ರತ್ಯುಷ ಸಾವಿನ ಪ್ರಕರಣದಲ್ಲಿ ಈ ಸಿದ್ಧಾರ್ಥ್ ರೆಡ್ಡಿಯೇ ಅಸಲಿ ದೋಷಿ ಎಂದು ನ್ಯಾಯಾಲಯ ಹೇಳಿದೆ. ಆತ್ಮಹತ್ಯೆಗೆ ಪ್ರಚೋದನೆ ಮತ್ತು ಸಹಾಯ ಮಾಡಿದ ಆರೋಪದ ಮೇಲೆ ಸುಪ್ರೀಂಕೋರ್ಟ್ ಆತನನ್ನು ದಂಡಿಸಿದೆ. ನಾಲ್ಕು ವಾರಗಳ ಒಳಗಾಗಿ ಪೊಲೀಸರಿಗೆ ಶರಣಾಗಬೇಕು ಎಂದು ಗುಡುಗಿದೆ.
ಒಬ್ಬ ನಟಿ ಮಣ್ಣಾಗಿ ಎರಡು ದಶಕಗಳೇ ಕಳೆದಿವೆ. ಆದರೆ ಮಗಳ ಸಾವಿಗೆ ನ್ಯಾಯ ಬೇಕು ಎಂದು ಹಠ ಹಿಡಿದಿದ್ದ ಒಬ್ಬ ತಾಯಿಯ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ.
