ಇಸ್ಲಮಾಬಾದ್: ಅವತ್ತು 1992ರ ಆ ಸುಂದರ ಸಂಜೆ, ಮೆಲ್ಬೋರ್ನ್ ಮೈದಾನದಲ್ಲಿ ವಿಶ್ವಕಪ್ ಎತ್ತಿ ಹಿಡಿದು ಗರ್ಜಿಸುತ್ತಿದ್ದ ಆ ಸ್ಪುರದ್ರೂಪಿ ಪಠಾಣ ನೆನಪಿದ್ದಾನಲ್ಲ? ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳ ಕಣ್ಮಣಿಯಾಗಿದ್ದ, ಹೆಣ್ಣುಮಕ್ಕಳ ಹಾರ್ಟ್-ಬೀಟ್ ಆಗಿದ್ದ ಅದೇ ಇಮ್ರಾನ್ ಖಾನ್ ಇಂದು ಪಾಕಿಸ್ತಾನದ ಅಡಿಯಾಲ ಜೈಲಿನ ನಾಲ್ಕು ಗೋಡೆಗಳ ಮಧ್ಯೆ ನರಳುತ್ತಿದ್ದಾನೆ. ದುರಂತ ಅಂದರೆ, ಇಡೀ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಆ ಕಣ್ಣುಗಳು ಇಂದು ದೃಷ್ಟಿಯನ್ನೇ ಕಳೆದುಕೊಳ್ಳುತ್ತಿವೆ!

ಪಾಕಿಸ್ತಾನದ ರಾಜಕೀಯ ಎಂಬುದು ಒಂದು ವಿಷಸರ್ಪವಿದ್ದಂತೆ. ಯಾವ ಹೊತ್ತಿನಲ್ಲಿ ಯಾರನ್ನು ನುಂಗುತ್ತದೋ ಗೊತ್ತಿಲ್ಲ. ಭ್ರಷ್ಟಾಚಾರದ ಆರೋಪದ ಮೇಲೆ ಎರಡು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಇಮ್ರಾನ್ ಖಾನ್ ಸ್ಥಿತಿ ಈಗ ಶೋಚನೀಯವಾಗಿದೆ. ಅಕ್ಟೋಬರ್ 2025ರವರೆಗೂ ಚೆನ್ನಾಗಿಯೇ ಇದ್ದ ಆ ಕಣ್ಣುಗಳಲ್ಲಿ ಈಗ ಕತ್ತಲು ಆವರಿಸುತ್ತಿದೆ. ಪಾಪಿ ಜೈಲು ಆಡಳಿತಕ್ಕೆ ಇಮ್ರಾನ್ ನೂರಾರು ಬಾರಿ ಮೊರೆ ಇಟ್ಟಿದ್ದರೂ, ಅಲ್ಲಿನ ಸರ್ಕಾರ ಕಿವುಡಾಗಿದೆ. ಬಲಗಣ್ಣಿನ ದೃಷ್ಟಿ ಬಹುತೇಕ ಹೋಗಿದೆ. ಕಣ್ಣಿನೊಳಗೆ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ಹೇಳುತ್ತಿದ್ದರೂ, ಅಲ್ಲಿನ ಕೋರ್ಟು ಮರುಪರೀಕ್ಷೆಗೆ ಪರ್ಮಿಷನ್ ಕೊಡುತ್ತಿಲ್ಲ ಅಂದರೆ ಏನನ್ನಬೇಕು?

ಇದನ್ನೆಲ್ಲಾ ನೋಡಿ ಸುಮ್ಮನಿರಲು ಸಾಧ್ಯವಾಗದ ವಿಶ್ವ ಕ್ರಿಕೆಟ್‌ನ 14 ದಿಗ್ಗಜರು ಈಗ ಬೀದಿಗೆ ಇಳಿದಿದ್ದಾರೆ. ಭಾರತದ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಮತ್ತು ಹರಿಯಾಣ ಹರಿಕೇನ್ ಕಪಿಲ್ ದೇವ್ ಅಕ್ಷರಶಃ ಕೆಂಡವಾಗಿದ್ದಾರೆ. ಪಾಕ್ ಸರ್ಕಾರಕ್ಕೆ ಒಂದು ಖಡಕ್ ಪತ್ರ ಬರೆದಿರುವ ಈ ದಿಗ್ಗಜರು, “ಇಮ್ರಾನ್ ಒಬ್ಬ ಗ್ರೇಟ್ ಕ್ರಿಕೆಟರ್, ಅವನಿಗೆ ಸರಿಯಾದ ಚಿಕಿತ್ಸೆ ಕೊಡಿ” ಎಂದು ಗೋಗರೆಯುತ್ತಿದ್ದಾರೆ. ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ ಈ ಪತ್ರದ ಸಾರಥ್ಯ ವಹಿಸಿದ್ದರೆ, ಗವಾಸ್ಕರ್ ಮಾತ್ರ ಅತೀವ ಕಳವಳ ವ್ಯಕ್ತಪಡಿಸಿದ್ದಾರೆ. “ನಮ್ಮ ಪೈಪೋಟಿ ಏನಿದ್ದರೂ ಮೈದಾನದ ಒಳಗೆ ಮಾತ್ರ, ಆದರೆ ಮೈದಾನದ ಆಚೆ ಇಮ್ರಾನ್ ನಮ್ಮ ಸ್ನೇಹಿತ, ಅವನಿಗೆ ಈ ಸ್ಥಿತಿ ಬರಬಾರದಿತ್ತು” ಅಂದಿದ್ದಾರೆ ಸನ್ನಿ.
ತನ್ನ ದೇಶಕ್ಕೆ ವಿಶ್ವಕಪ್ ತಂದುಕೊಟ್ಟ ನಾಯಕನನ್ನು ಇವತ್ತು ಆ ದೇಶವೇ ಹಂತ ಹಂತವಾಗಿ ಕಣ್ಣಿಲ್ಲದವನನ್ನಾಗಿ ಮಾಡುತ್ತಿದೆ. ಇಮ್ರಾನ್ ಸಹೋದರಿ ಸುಪ್ರೀಂ ಕೋರ್ಟ್‌ನಲ್ಲಿ ನಿಂತು ಹನಿ ಹನಿ ಕಣ್ಣೀರಿಡುತ್ತಿದ್ದರೆ, ಇತ್ತ ಇಮ್ರಾನ್ ಜೈಲಿನ ಕತ್ತಲ ಕೋಣೆಯಲ್ಲಿ ತನ್ನ ಹಣೆಬರಹವನ್ನು ನೆನೆದು ಮರುಗುತ್ತಿದ್ದಾನೆ. ರಾಜಕೀಯದ ಈ ಕೆಸರೆರಚಾಟದಲ್ಲಿ ಒಬ್ಬ ಕ್ರೀಡಾ ದಂತಕಥೆ ಅಕ್ಷರಶಃ ಕುರುಡಾಗುತ್ತಿದ್ದಾನೆ ಗೆಳೆಯರೇ.. ಇದಕ್ಕಿಂತ ದೊಡ್ಡ ಟ್ರಾಜೆಡಿ ಬೇಕೆ?
