ಬೆಂಗಳೂರು: 2023ರ ಮೇ ತಿಂಗಳ ಧಗಧಗಿಸುವ ಬಿಸಿಲು. ಕರ್ನಾಟಕದ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದ ಕಾಲ. ಅಧಿಕಾರದ ಗದ್ದುಗೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬೀದಿಜಗಳ ಶುರುವಾಗಿತ್ತು. ಆಗಲೇ ನೋಡಿ, ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ್ದು ಆ ಒಂದು ಜಾಹೀರಾತು—’ಭ್ರಷ್ಟಾಚಾರದ ರೇಟ್ ಕಾರ್ಡ್’!

ಬಿಜೆಪಿ ಸರ್ಕಾರದಲ್ಲಿ ಯಾವುದಕ್ಕೆ ಎಷ್ಟು ಪರ್ಸೆಂಟ್ ಕೊಡಬೇಕು ಎಂಬ ಪಟ್ಟಿಯನ್ನು ಕಾಂಗ್ರೆಸ್ ಅಕ್ಷರಶಃ ಬೀದಿಗೆ ಹಾಕಿತ್ತು. ಗುತ್ತಿಗೆದಾರರಿಂದ ’40 ಪರ್ಸೆಂಟ್’ ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದ ಹಣೆಪಟ್ಟಿ ಹಚ್ಚಲಾಗಿತ್ತು. ಈ ʻರೇಟ್ ಕಾರ್ಡ್’ ಅನ್ನು ರಾಹುಲ್ ಗಾಂಧಿಯವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇ ತಡ, ಕಮಲ ಪಾಳೆಯ ಕೆಂಡಾಮಂಡಲವಾಯಿತು. ಮಾನನಷ್ಟವಾಯಿತು ಎಂದು ಬಿಜೆಪಿ ಪರವಾಗಿ ಕೇಶವಪ್ರಸಾದ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು.

ಆದರೆ ಇದೀಗ ಕರ್ನಾಟಕ ಹೈಕೋರ್ಟ್ ಈ ಇಡೀ ಪ್ರಹಸನಕ್ಕೆ ಒಂದು ಫುಲ್ ಸ್ಟಾಪ್ ಇಟ್ಟಿದೆ. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರ ಪೀಠದ ಮುಂದೆ ಈ ಪ್ರಕರಣ ಬಂದಾಗ, ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಬಿಜೆಪಿ ದಾಖಲಿಸಿದ್ದ ಆ ಮಾನನಷ್ಟ ಮೊಕದ್ದಮೆಯನ್ನು ಸಾರಾಸಗಟಾಗಿ ರದ್ದುಗೊಳಿಸಿದೆ.
