ಕಡಬ: ಅದು ಬಂಟ್ರ ಗ್ರಾಮದ ಗಾನದ ಕೊಟ್ಯ’. ಅಲ್ಲಿ ಸಾಲಾಗಿ ನಿಂತಿದ್ದ ಬೈಕುಗಳು, ಗುಂಪುಗೂಡಿದ್ದ ಮಂದಿ ಮತ್ತು ಕಾಲಿಗೆ ಹರಿತವಾದ ‘ಬಾಳು’ ಕಟ್ಟಿ ಸಾವು-ಬದುಕಿನ ಹೋರಾಟಕ್ಕೆ ಇಳಿದಿದ್ದ ಹುಂಜಗಳು… ಅಲ್ಲಿ ನಡೆಯುತ್ತಿದ್ದದ್ದು ಮಣ್ಣಿನ ಸೊಗಡಿನ ಆಟವಲ್ಲ, ಬದಲಿಗೆ ಕಂತೆ ಕಂತೆ ನೋಟುಗಳನ್ನು ಪಣಕ್ಕಿಟ್ಟಿದ್ದ ಜೂಜಾಟ!

ಖಚಿತ ಮಾಹಿತಿ ಬೆನ್ನತ್ತಿದ ಕಡಬ ಪೊಲೀಸರು ಸದ್ದಿಲ್ಲದೆ ಅಡ್ಡೆಗೆ ಲಗ್ಗೆ ಇಟ್ಟಾಗ ಅಲ್ಲಿ ನಡೆದಿದ್ದೇ ಬೇರೆ. ಖಾಕಿ ಬಣ್ಣ ಕಂಡಿದ್ದೇ ತಡ, ಕಣದಲ್ಲಿದ್ದ ‘ಅಂಕ’ದ ವೀರರು ಕೋಳಿಗಳನ್ನು ಅಲ್ಲೇ ಎಸೆದು ಹತ್ತಿರದ ಕುರುಚಲು ಕಾಡಿನೊಳಗೆ ದೂಸ್ರಾ ಮಾತಿಲ್ಲದೆ ಎಸ್ಕೇಪ್ ಆಗಿದ್ದಾರೆ.
ಸದ್ಯಕ್ಕೆ ಪೊಲೀಸರ ಎಫ್.ಐ.ಆರ್ ಬುಕ್ಕಿನಲ್ಲಿ ಬಂಟ್ರದ ಉಮೇಶಗೌಡ ಮತ್ತು ಐತ್ತೂರಿನ ವಿನಯ ಎಂಬಿಬ್ಬರು ‘ಪರಾರಿ’ ಆಸಾಮಿಗಳಾಗಿ ದಾಖಲಾಗಿದ್ದಾರೆ. ಅಕ್ರಮ ಜೂಜಾಟ ಮತ್ತು ಮೂಕ ಪ್ರಾಣಿಗಳಿಗೆ ಹಿಂಸೆ ನೀಡಿದ ಆರೋಪದ ಮೇಲೆ ಕಡಬ ಠಾಣೆಯಲ್ಲಿ ಕೇಸ್ ಜಡಿಯಲಾಗಿದೆ. ಸದ್ಯಕ್ಕೆ ಅಂಕದ ಅಖಾಡ ಶಾಂತವಾಗಿದೆ, ಆದರೆ ಓಡಿದವರಿಗಾಗಿ ಖಾಕಿ ಜಾಲ ಬೀಸಿದೆ!
