
ನವದೆಹಲಿ: ದೇಶದಲ್ಲಿ ಇಂದು ಡೇಟಾ ಅಗ್ಗದ ದರದಲ್ಲಿ ಸಿಗುತ್ತಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ, ನಿಮ್ಮ ಜೀವನ ಮತ್ತು ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.


ಶಿಕ್ಷಣವು ಮಕ್ಕಳಿಗೆ ಹೊರೆ ಎನಿಸಬಾರದು, ಅರೆಮನಸ್ಸಿನಿಂದ ಕಲಿತರೆ ವಿದ್ಯೆ ತಲೆಗೆ ಹತ್ತುವುದಿಲ್ಲ, ಆಸಕ್ತಿಯಿಲ್ಲದಿದ್ದರೆ ಶಿಕ್ಷಣವು ಜೀವನವನ್ನು ಯಶಸ್ವಿಗೊಳಿಸುವುದಿಲ್ಲವಾದ್ದರಿಂದ ಎಲ್ಲರೂ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ‘ಪರೀಕ್ಷಾ ಪೆ ಚರ್ಚಾ 2026’ ನ ಒಂಬತ್ತನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ ಸಲಹೆ ನೀಡಿದರು.


ಇಂದು ದೆಹಲಿಯ ತಮ್ಮ ನಿವಾಸದಲ್ಲಿ ದೇಶದ ಹಲವು ರಾಜ್ಯಗಳಿಂದ ಬಂದ ಆಯ್ದ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ನಮ್ಮ ಗುರಿ ತಲುಪಬಹುದಾದದ್ದಾಗಿರಬೇಕು, ಹಾಗೆಂದು ಸುಲಭವಾಗಿ ಸಾಧಿಸಲಾಗದಂತಿರಬೇಕು. ಮನಸ್ಸನ್ನು ಪಳಗಿಸಿ, ಮನಸ್ಸಿನ ಜೊತೆ ಸಂಪರ್ಕ ಹೊಂದಿ, ನೀವು ಅಧ್ಯಯನ ಮಾಡಲು ಅಗತ್ಯವಿರುವ ವಿಷಯಗಳನ್ನು ಇಟ್ಟುಕೊಳ್ಳಿ. ಆಗ ನೀವು ಯಾವಾಗಲೂ ಯಶಸ್ಸನ್ನು ಕಾಣುವಿರಿ” ಎಂದರು.