
ಮುಂಬಯಿ: ಬಾಲಿವುಡ್‌ನ ಖ್ಯಾತ ಹಾಸ್ಯನಟ ರಾಜ್‌ಪಾಲ್ ಯಾದವ್ ಅವರಿಗೆ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಆದೇಶಿಸಿದೆ.

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ನಟನಿಗೆ ಈ ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ಆದೇಶದಿಂದಾಗಿ ರಾಜ್‌ಪಾಲ್ ಯಾದವ್ ಜೈಲು ಸೇರುವ ಪರಿಸ್ಥಿತಿ ಎದುರಾಗಿದೆ.
2010 ರಲ್ಲಿ ರಾಜಪಾಲ್ ಯಾದವ್ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದ ಹೆಸರು ”ಅತಾ ಪತಾ ಲಾಪತಾ”. ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಹೀನಾಯವಾಗಿ ಸೋತಿತ್ತು. ಈ ಚಿತ್ರಕ್ಕಾಗಿ ರಾಜ್‌ಪಾಲ್ ಅವರು 5 ಕೋಟಿ ರೂಪಾಯಿ ಸಾಲವನ್ನು ಮಾಡಿದ್ದರು. ಸಾಲವನ್ನು ವಾಪಾಸ್ ನೀಡುವಲ್ಲಿ ರಾಜ್‌ಪಾಲ್ ವಿಫಲರಾಗಿದ್ದರು.

ಈ ಸಾಲ ಬಡ್ಡಿ ಸೇರಿ 9 ಕೋಟಿ ರೂಪಾಯಿ ಆಗಿತ್ತು. ಬಡ್ಡಿ ಸೇರಿ ಸಾಲದ ಮೊತ್ತ ಹೆಚ್ಚಾದರೂ ಇದನ್ನು ರಾಜ್‌ಪಾಲ್ ಮರಳಿ ನೀಡಿರಲಿಲ್ಲ. ಈ ಹಿನ್ನೆಲೆ ಎಂ.ಎಸ್ ಮುರಳಿ ಪ್ರೊಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿತ್ತು. ಆಗ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯ ಆರು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿತ್ತು. ಸೆಷನ್ಸ್ ನ್ಯಾಯಾಲಯ ಕೂಡ 2019ರಲ್ಲಿ ಈ ತೀರ್ಪನ್ನು ಎತ್ತಿ ಹಿಡಿದಿತ್ತು.
ಆ ಬಳಿಕ ರಾಜ್‌ಪಾಲ್ ಈ ಸಂಬಂಧ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್‌ನ ಪೀಠ ಶಿಕ್ಷೆಯ ಆದೇಶವನ್ನು ರದ್ದು ಮಾಡಿತ್ತು. ಈ ಹಣಕಾಸಿನ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಳ್ಳುವ ಭರವಸೆಯನ್ನು ಆಗ ರಾಜ್‌ಪಾಲ್ ಯಾದವ್ ನ್ಯಾಯಾಲಯಕ್ಕೆ ನೀಡಿದ್ದರು.
ಆದರೆ ರಾಜ್‌ಪಾಲ್ ಕೋರ್ಟಿಗೆ ಹಣ ಮರಳಿ ನೀಡುತ್ತೇನೆ ಎಂದಿದ್ದರೂ, ಒಂದು ಪೈಸೆಯನ್ನೂ ಕೊಟ್ಟಿರಲಿಲ್ಲ. ಫೆ.3 ರಂದು ಈ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ರಾಜ್‌ಪಾಲ್ ವಿರುದ್ಧ ಕಿಡಿಕಾರಿದೆ.
ಡಿಸೆಂಬರ್ 16, 2025 ರೊಳಗೆ ₹40 ಲಕ್ಷ ಮತ್ತು ಈ ವರ್ಷದ ಜನವರಿ 15 ರೊಳಗೆ ಉಳಿದ ₹2.1 ಕೋಟಿ. ಹಣ ಪಾವತಿಸುವುದಾಗಿ ರಾಜ್‌ಪಾಲ್ ಯಾದವ್ ಹೇಳಿದ್ದರು ಆದರೆ ಇಲ್ಲಿಯವರೆಗೆ ಹಣ ಪಾವತಿಯಾಗಿಲ್ಲ ಎಂದು ನ್ಯಾಯಾಧೀಶ ಸ್ವರಣಕಾಂತ್ ಶರ್ಮಾ ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಎರಡು ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ಜಮಾ ಮಾಡಲಾಗಿದ್ದರೂ, 9 ಕೋಟಿ ರೂಪಾಯಿ ಇನ್ನೂ ಬಾಕಿ ಇದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿರುವ ನ್ಯಾಯಾಧೀಶರು, ನ್ಯಾಯಾಲಯದ ಮುಂದೆ ನೀಡಲಾದ ಭರವಸೆಗಳನ್ನು ಪದೇ ಪದೇ ಉಲ್ಲಂಘಿಸಿದ, ಹಣವನ್ನು ಪಾವತಿ ಮಾಡದ ರಾಜ್‌ಪಾಲ್ ಯಾದವ್ ಉಲ್ಲಂಘನೆಯ ದೃಷ್ಟಿಯಿಂದ, ಜೈಲು ಅಧೀಕ್ಷಕರ ಮುಂದೆ ಶರಣಾಗುವಂತೆ ಕೋರ್ಟ್ ಆದೇಶಿಸಿದೆ.