ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡವನ್ನು ದೇವದತ್ ಪಡಿಕ್ಕಲ್ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಟೀಮ್ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಕಾಣಿಸಿಕೊಂಡಿದ್ದಾರೆ.

ಹಾಗೆಯೇ ಕಳೆದ ಪಂದ್ಯದ ವೇಳೆ ಗಾಯಗೊಂಡು ಹೊರಗುಳಿದಿದ್ದ ಅನುಭವಿ ದಾಂಡಿಗ ಕರುಣ್ ನಾಯರ್ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ಮಯಾಂಕ್ ಅಗರ್ವಾಲ್ ಕೂಡ ತಂಡದಲ್ಲಿದ್ದಾರೆ. ಆದರೆ ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ವೇಗಿ ವೈಶಾಕ್ ವಿಜಯಕುಮಾರ್ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.
ಇನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಲಿದ್ದು, ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಬ್ಯಾಟ್ ಬೀಸಲಿದ್ದಾರೆ.

ಐದನೇ ಕ್ರಮಾಂಕದಲ್ಲಿ ಸ್ಮರಣ್ ರವಿಚಂದ್ರನ್ ಕಣಕ್ಕಿಳಿಯಲಿದ್ದು, ಆರನೇ ಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್ ಕಾಣಿಸಿಕೊಳ್ಳಲಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೃತಿಕ್ ಕೃಷ್ಣ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಇನ್ನು ಬೌಲರ್ಗಳಾಗಿ ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ ಹಾಗೂ ವಿದ್ಯಾಧರ್ ಪಾಟೀಲ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಕರ್ನಾಟಕ ತಂಡ: ದೇವದತ್ ಪಡಿಕ್ಕಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ಕರುಣ್ ನಾಯರ್, ಕೆವಿ ಅನೀಶ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ಎಂ. ವೆಂಕಟೇಶ್, ವಿದ್ಯಾಧರ್ ಪಾಟೀಲ್, ವಿದ್ವತ್ ಕಾವೇರಪ್ಪ, ಪ್ರಸಿದ್ಧ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಕೆಎಲ್ ಶ್ರೀಜಿತ್.

ಪಂಜಾಬ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್ಗಳ ಜಯ ಸಾಧಿಸಿರುವ ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಫೆಬ್ರವರಿ 6 ರಂದು ನಡೆಯಲಿರುವ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಲಿದೆ.
ಶಾರ್ದೂಲ್ ಠಾಕೂರ್ ಮುಂದಾಳತ್ವದ ಮುಂಬೈ ತಂಡದಲ್ಲೂ ಸ್ಟಾರ್ ಬ್ಯಾಟರ್ಗಳ ದಂದೇ ಇದೆ. ಅದರಲ್ಲೂ ಟೆಸ್ಟ್ ಸ್ಪೆಷಲಿಸ್ಟ್ಗಳೆಂದೇ ಗುರುತಿಸಿಕೊಂಡಿರುವ ಸರ್ಫರಾಝ್ ಖಾನ್, ಯಶಸ್ವಿ ಜೈಸ್ವಾಲ್, ಸಿದ್ಧೇಶ್ ಲಾಡ್ನಂತಹ ದಾಂಡಿಗರು ಇರುವುದರಿಂದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಮುಂಬೈ ತಂಡ: ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಮುಶೀರ್ ಖಾನ್, ಅಖಿಲ್ ಹೆರ್ವಾಡ್ಕರ್, ಸಿದ್ದೇಶ್ ಲಾಡ್, ಸರ್ಫರಾಝ್ ಖಾನ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಸಾಯಿರಾಜ್ ಪಾಟೀಲ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಾಸ್ತ್. ಸೂರ್ಯಾಂಶ್ ಶೆಡ್ಗೆ, ದಿವ್ಯೇಶ್ ಸಕ್ಸೇನಾ.