ಚಿಕ್ಕಬಳ್ಳಾಪುರ: ನಗರದಲ್ಲಿ ಅಪ್ರಾಪ್ತ ಬಾಲಕರಿಂದ ನಡೆದ ನೈತಿಕ ಪೊಲೀಸ್‌ಗಿರಿ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ, ಹಿಂದೂ ಯುವಕನೊಂದಿಗೆ ಅನ್ಯಕೋಮಿನ ಯುವತಿ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಪುಂಡರು ಅವರ ವೀಡಿಯೋ ಚಿತ್ರೀಕರಿಸಿ ಅಡ್ಡಗಟ್ಟಿ ಕಿರುಕುಳ ನೀಡಿದ್ದಾರೆ.

‘ನಾವಿಬ್ಬರೂ ಸ್ನೇಹಿತರು’ ಎಂದರೂ ಬಿಡದ ಅಪ್ರಾಪ್ತರು!
ಶಿಡ್ಲಘಟ್ಟ ಮೂಲದ ವಿದ್ಯಾರ್ಥಿಗಳಾದ ಯುವಕ ಮತ್ತು ಯುವತಿ ಪರಸ್ಪರ ಸ್ನೇಹಿತರಾಗಿದ್ದು, ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ. ಅವರನ್ನು ಅಡ್ಡಗಟ್ಟಿದ ಅಪ್ರಾಪ್ತ ಬಾಲಕರು, ವೀಡಿಯೋ ತೋರಿಸಿ ಪ್ರಶ್ನೆ ಮಾಡುವ ನೆಪದಲ್ಲಿ ಕಿರುಕುಳ ನೀಡಿದ್ದಾರೆ. ತಾವು ಒಂದೇ ಊರಿನವರು ಹಾಗೂ ಸ್ನೇಹಿತರು ಎಂದು ಸ್ಪಷ್ಟಪಡಿಸಿದರೂ, ಆರೋಪಿಗಳು ಅದನ್ನು ನಿರ್ಲಕ್ಷ್ಯಿಸಿ ನೈತಿಕ ಪೊಲೀಸ್‌ಗಿರಿಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ವಿಡಿಯೋ ವೈರಲ್ ಆದ ಬಳಿಕ ಪೊಲೀಸ್ ಕ್ರಮ
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ನಗರ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡು, ಕಿರುಕುಳ ನೀಡಿದ್ದ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.
ನಗರದ ನಿವಾಸಿಗಳು ಇಂತಹ ನೈತಿಕ ಪೊಲೀಸ್‌ಗಿರಿ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.
