ಮಂಗಳೂರು: ಬೆಂಗಳೂರಿನ ಒರಿಯಂಟಲ್ ಫೌಂಡೇಶನ್ ರಿಜಿಸ್ಟರ್ ವತಿಯಿಂದ ನಡೆಯುವ 2026 ಸಾಲಿನ ಪ್ರತಿಷ್ಠಿತ ನೋಬೆಲ್ ಕನ್ನಡಿಗ ರಾಜ್ಯ ಪ್ರಶಸ್ತಿಗೆ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ರವರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ, ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಫೆಬ್ರವರಿ 1 ರಂದು ಭಾನುವಾರ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಜನಪ್ರಿಯ ನಾಯಕ ನಟ ಹಾಗೂ ನೃತ್ಯ ನಿರ್ದೇಶಕರಾದ ವಿನೋದ್ ರಾಜ್, ಹೆಸರಾಂತ ನಟಿ ಅಭಿನಯ, ಗಾಯಕಿ ಡಾ.ಗೀತಾ ಕೈವಾರ, ಹಾಸ್ಯ ನಟ ಮೈಸೂರು ರಮಾನಂದ, ಮುಖ್ಯ ಅತಿಥಿಗಳಾಗಿರುವರು ಎಂದು ಸಂಸ್ಥೆಯ ಸಂಸ್ಥಾಪಕರಾದ ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಮಾಲತಿ ಶೆಟ್ಟಿ ಮಾಣೂರುರವರು ಕಳೆದ 21 ವರ್ಷಗಳಿಂದ ಸಾಹಿತ್ಯ, ಪತ್ರಿಕೋದ್ಯಮ, ಸಮಾಜಸೇವೆ, ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಳೆದ 13 ವರ್ಷಗಳಿಂದ ಸಾಹಿತ್ಯ ಪದ ಅಮೃತ ಪ್ರಕಾಶ ಪತ್ರಿಕೆಯನ್ನು ನಡೆಸುತ್ತಿದ್ದಾರೆ. 9 ಕೃತಿಗಳನ್ನು ಪ್ರಕಟಿಸಿದ್ದಾರೆ. ಇತರ ಹಿರಿಯ ಕಿರಿಯ ಲೇಖಕರ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಈಗಾಗಲೇ 49 ಕೃತಿಗಳನ್ನು ಪತ್ರಿಕೆಯ ವತಿಯಿಂದ ಬಿಡುಗಡೆಗೊಳಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡುವ ಸಲುವಾಗಿ ಈಗಾಗಲೇ 117 ಶಾಲಾ-ಕಾಲೇಜುಗಳಲ್ಲಿ ಉಚಿತ ಸಾಹಿತ್ಯ ಅಭಿರುಚಿ ಕಾರ್ಯಕ್ರಮ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಮಂಗಳೂರಿನ ಅತ್ತಾವರ ಪತಿ ಸತ್ಯ ಪ್ರಕಾಶ್ ಶೆಟ್ಟಿ ಜೊತೆ ಸಾಹಿತ್ಯ ನಂದನದಲ್ಲಿ ವಾಸವಾಗಿದ್ದಾರೆ. ಇವರ ತಂದೆ ಹಿರಿಯ ಯಕ್ಷಗಾನ ಕಲಾವಿದರಾದ ದಿವಂಗತ ಕಿಟ್ಟಣ್ಣ ಶೆಟ್ಟಿ ಮಾಣೂರು ಹಾಗೂ ರೇವತಿ ಶೆಟ್ಟಿ ಮಾಣೂರು ಅವರ ದಂಪತಿಗಳ ಸುಪುತ್ರಿ.