ಸುಳ್ಯ: ಪಯಸ್ವಿನಿ ನದಿಯನ್ನು ಬಿದಿರಿನ ಪಿಂಡಿಯ ಮೂಲಕ ಸುಳ್ಯದ ಜನತೆ ದಾಟುತ್ತಿದ್ದಾರೆ. ಈ ಮೂಲಕ 20 ವರ್ಷದ ಬಳಿಕ ಸುಳ್ಯದ ಜನತೆಗೆ ಬಿದಿರಿನ ಪಿಂಡಿಯಲ್ಲಿ ನದಿ ದಾಟುವ ಅವಕಾಶ, ಅನಿವಾರ್ಯತೆ ಒದಗಿ ಬಂದಿದೆ.

ಸುಳ್ಯದ ಓಡಬಾಯಿ ಎಂಬಲ್ಲಿ ಸುಳ್ಯ ನದಿಗೆ 2೦ ವರ್ಷದ ಮೊದಲು ತೂಗುಸೇತುವೆ ನಿರ್ಮಿಸಲಾಗಿತ್ತು. ಪ್ರಸ್ತುತ ತೂಗುಸೇತುವೆ ದುರಸ್ತಿ, ನಿರ್ವಹಣೆ ಕಾಮಗಾರಿ ನಡೆಯುತ್ತಿರುವುದರಿಂದ ತೂಗುಸೇತುವೆ ಮೇಲೆ ಸಂಚಾರ ನಿಷೇಽಸಲಾಗಿದೆ. ಈ ಹಿನ್ನಲೆಯಲ್ಲಿ ಓಡಬಾಯಿ ಭಾಗದಿಂದ ದೊಡ್ಡೇರಿ ಭಾಗಕ್ಕೆ ತೆರಳಲು ಬಿದಿರಿನ ಪಿಂಡಿ ವ್ಯವಸ್ಥೆಯನ್ನು ಸ್ಥಳೀಯರು ಮಾಡಿಕೊಂಡಿದ್ದಾರೆ.

ತೂಗುಸೇತುವೆ ಸಂಚಾರ ನಿಷೇಧಿಸಲಾಗಿರುವ ಹಿನ್ನಲೆಯಲ್ಲಿ ಜನರು ದೊಡ್ಡೇರಿ ಭಾಗವನ್ನು ಸುತ್ತು ಬಳಸಿ, ವಾಹನ ಬಾಡಿಗೆ ಮಾಡಿ ತೆರಳಬೇಕಾಗುತ್ತದೆ. ಅದಕ್ಕಾಗಿ ತಾತ್ಕಲಿಕ/ಪರ್ಯಾಯವಾಗಿ ಬಿದಿರಿನ ಪಿಂಡಿ ವ್ಯವಸ್ಥೆ ಮಾಡಲಾಗಿದೆ. ದೊಡ್ಡೇರಿಯ ಪ್ರೇಮಾನಂದ ಅವರು ಪಿಂಡಿಯನ್ನು ಸಿದ್ಧಪಡಿಸಿದ್ದು, ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇದನ್ನು ರಾಧಾಕೃಷ್ಣ ದೊಡ್ಡೇರಿ ಅವರು ಚಲಾಯಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಮಧ್ಯಾಹ್ನ 2ರಿಂದ ರಾತ್ರಿ 8 ಗಂಟೆಯವರೆಗೆ ಪಿಂಡಿ ಬಿದಿರು ಸೇವೆ ನೀಡಲಾಗುತ್ತಿದೆ. ಒಬ್ಬರಿಗೆ 20 ರೂ. ಹಣ ನಿಗ ಮಾಡಲಾಗಿದೆ. ಬೆಳಗ್ಗೆ ಹಾಗೂ ಸಂಜೆ ಸುಳ್ಯ ಭಾಗಕ್ಕೆ ಹಾಗೂ ದೊಡ್ಡೇರಿ ಭಾಗಕ್ಕೆ ತೆರಳುವವರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ದಿನಕ್ಕೆ 30-50 ಮಂದಿ ಒಂದು ದಿನಕ್ಕೆ ಸಂಚರಿಸುತ್ತಾರೆ ಎನ್ನುತ್ತಾರೆ. ರಾಧಾಕೃಷ್ಣ ಅವರು ಒಟ್ಟಿನಲ್ಲಿ ತಾತ್ಕಲಿಕವಾಗಿ ಆರಂಭಿಸಿರುವ ಬಿದಿರಿನ ಪಿಂಡಿ ವ್ಯವಸ್ಥೆ ಈ ಭಾಗದ ಜನತೆಗೆ ಪ್ರಯೋಜನಕಾರಿಯಾಗಿದೆ.

ಬಿದಿರಿನಿಂದ ತಯಾರಿಸಲಾಗಿರುವ ಈ ಪಿಂಡಿಯನ್ನು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕಟ್ಟಲಾಗಿರುವ ಹಗ್ಗದ ಸಹಾಯವನ್ನು ಪಡೆದು ಚಲಾಯಿಸಲಾಗುತ್ತಿದೆ. ಜನರ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ಎರಡು ಟ್ಯೂಬ್‌ನ್ನು ಜೊತೆಗಿರಿಸಲಾಗಿದೆ. ಒಂದು ಬಾರಿಗೆ 8 ಮಂದಿ ಪ್ರಯಾಣಿಸಬಹುದಾಗಿದೆ. ಇದಲ್ಲದೇ ಪ್ರಸ್ತುತ ನದಿಯಲ್ಲಿ ನೀರಿನ ಮಟ್ಟ ವೂ ಕಡಿಮೆಯಾಗಿದೆ.

ಒಂದೊಮ್ಮೆ ಸಂಪರ್ಕ ಸೇತುವೆಗಳು ಇಲ್ಲದ ಸಂದರ್ಭದಲ್ಲಿ ಅನಿವಾರ್ಯವಾಗಿ ಜನತೆ ಬಿದಿರಿನ ಪಿಂಡಿಯಲ್ಲಿ ಸಂಚರಿಸುತ್ತಿದ್ದರು. ಆದರೆ ಸುಳ್ಯದಲ್ಲಿ ಪಿಂಡಿ ಬಿದಿರು ಬಳಕೆ ತಾತ್ಕಲಿಕವಾಗಿ ಮಾಡಲಾಗಿದೆ. ಹೆಚ್ಚಿನ ಕಡೆಗಳಲ್ಲಿ ಸೇತುವೆ, ತೂಗುಸೇತುವೆ ನಿರ್ಮಾಣಗೊಂಡಿರುವುದರಿಂದ ಪಿಂಡಿ ಬಳಕೆ ಇತ್ತೀಚಿನ ದಿನಗಳಲ್ಲಿ ಇಲ್ಲದಾಗಿದ್ದು, ಪರಿಣಾಮ ಓಡಬಾಯಿಯಲ್ಲಿ ಪಿಂಡಿ ಬಳಕೆ ಮಾಡಲಾಗುತ್ತಿರುವುದರಿಂದ ಕೆಲಸ ಕಾರ್ಯಗಳಿಗೆ ನಗರಕ್ಕೆ ಬರುವವರು ಮಾತ್ರವಲ್ಲದೇ ಯುವಕರು, ಇತರೆ ಜನರು ಪಿಂಡಿಯಲ್ಲಿ ಸಂಚರಿಸುವ ಅನುಭವ ಪಡೆಯಲು ಆಗಮಿಸುತ್ತಿದ್ದಾರೆ ಎಂದು ರಾಧಾಕೃಷ್ಣ ಅವರು ತಿಳಿಸಿದ್ದಾರೆ.

ದೊಡ್ಡೇರಿ ಜನರು ಪಯಸ್ವಿನಿ ನದಿ ದಾಟಲು ಸುಮಾರು 20 ವರ್ಷಗಳ ಹಿಂದಿನವರೆಗೂ ಬಿದಿರಿನ ಪಿಂಡಿಯನ್ನೇ ಬಳಸುತ್ತಿದ್ದರು. ಅಂದು ಅಜ್ಜಾವರ ಗ್ರಾ.ಪಂ. ಟೆಂಡರ್ ಕರೆದು ವಹಿಸಿಕೊಂಡವರಿಗೆ ಪಿಂಡಿ ಬಳಕೆಗೆ ಅವಕಾಶ ನೀಡಲಾಗುತ್ತಿತ್ತು. ಒಂದು ಕಡೆಯಿಂದ ಇನ್ನೊಂದು ಕಡೆಗೆ ರೋಪ್ ಕಟ್ಟಿ ಅದರ ಸಹಾಯದಿಂದ ದೊಡ್ಡ ಗಾತ್ರದ ಪಿಂಡಿಯಲ್ಲಿ ಸಂಚಾರ ಮಾಡಲಾಗುತ್ತಿತ್ತು. ಅದರಲ್ಲಿ ಸುಮಾರು 25 ಮಂದಿ ಕುಳಿತುಕೊಳ್ಳುವಷ್ಟು ಅವಕಾಶ ಇತ್ತು. ಬಾರೀ ಮಳೆಗಾಲದಲ್ಲೂ ಪಯಸ್ವಿನಿ ನದಿ ತುಂಬಿ ಹರಿಯುವ ವೇಳೆಯೂ ಪಿಂಡಿ ಮೂಲಕವೇ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುತ್ತಿದ್ದರು.

ಅದಕ್ಕೂ ಮೊದಲು ಅಂದರೆ ಸುಮಾರು 50 ವರ್ಷದ ಹಿಂದೆ ಇಲ್ಲಿ ದೋಣಿಯ ಬಳಕೆ ಇದ್ದಿತ್ತು. ಒಂದೊಮ್ಮೆ ದೋಣಿ ದುರಂತ ಸಂಭವಿಸಿ ಪ್ರಾಣ ಹಾನಿ ಸಂಭವಿಸಿದ ಬಳಿಕ ಇಲ್ಲಿ ದೋಣಿ ಬಳಕೆಯನ್ನು ನಿಲ್ಲಿಸಲಾಗಿತ್ತು. ಆ ಬಳಿಕ ಬಿದಿರಿನ ಪಿಂಡಿಯ ಬಳಕೆ ಆರಂಭಿಸಲಾಗಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಪ್ರವಾಸೋದ್ಯಮಕ್ಕೆ ಪೂರಕ:
ಹೆಚ್ಚಿನ ಕಡೆಗಳಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುತ್ತಿದೆ. ನದಿಗಳಲ್ಲಿ ಬೋಟಿಂಗ್, ಕಾಯಕಿಂಗ್ ವ್ಯವಸ್ಥೆ ಮೂಲಕ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ. ಅದರಂತೆ ಸುಳ್ಯದ ಪಯಸ್ವಿನಿ ನದಿಯಲ್ಲೂ ಬೋಟಿಂಗ್, ಕಾಯಕಿಂಗ್‌ಗೆ ಪೂರಕ ವಾತವರಣಗಳಿವೆ. ಇಲ್ಲಿನ ಡ್ಯಾಂ ಮೇಲ್ಭಾಗದಲ್ಲೂ ಬೋಟಿಂಗ್ ಮಾಡಬಹುದು ಈ ಮೂಲಕ ಸುಳ್ಯದಲ್ಲೂ ಪ್ರವಾಸೋದ್ಯಮ ಬೆಳೆಸಲು ಅವಕಾಶ ಇದೆ. ಅದಕ್ಕೆ ಪೂರಕ ಎಂಬಂತೆ ಇದೀಗ ಬಿದಿರಿನ ಪಿಂಡಿ ಬಳಕೆ ಮಾಡುತ್ತಿರುವಲ್ಲಿ ಹೆಚ್ಚಿನವರು ಕೇವಲ ಇದರಲ್ಲಿ ಮನೋರಂಜನೆ / ಅನುಭವ ಪಡೆಯಲು ಬರುವವರು ಈ ರೀತಿಯ ಅಬಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಓಡಬಾಯಿ ತೂಗುಸೇತುವೆ ದುರಸ್ತಿ ನಡೆಯುತ್ತಿದ್ದು, ಸಂಚಾರ ನಿಷೇಽಸಲಾಗಿದೆ. ಈ ಹಿನ್ನಲೆಯಲ್ಲಿ ಬಿದಿರಿನ ಪಿಂಡಿ ಮೂಲಕ ಜನರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು ಪಿಂಡಿಯನ್ನು ಬಳಕೆ ಮಾಡುತ್ತಿದ್ದಾರೆ.