ಕುಳಾಯಿ: ಕಳವು ಮಾಡಿದ್ದ 1.95 ಲಕ್ಷ ಮೌಲ್ಯದ ಪೂಜಾ ಸಾಮಗ್ರಿ ವಶ; ಇಬ್ಬರ ಬಂಧನ

ಮಂಗಳೂರು: ಕುಳಾಯಿ ಗ್ರಾಮದ ಖಾಲಿ ಮನೆಯಲ್ಲಿದ್ದ ದೈವಗಳ ಮೂರ್ತಿಗಳು ಹಾಗೂ ಪೂಜಾ ಪರಿಕರಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿತರನ್ನು ಬಂಧಿಸಿ ಸುಮಾರು ರೂಪಾಯಿ 1.95 ಲಕ್ಷ ಮೌಲ್ಯದ ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಳಾಯಿ ಗ್ರಾಮದ ಯಶೋದ ಕ್ಲಿನಿಕ್ ಸಮೀಪದ ಅಮಿತಾ(43), ಪತಿ ಸುರೇಶ್ ಅವರ ತಾಯಿ ವಾಸವಿರುವ ಮನೆ ನಂ.6-177ರಲ್ಲಿ ಇದ್ದ ದೈವಗಳ ಮೂರ್ತಿಗಳು ಹಾಗೂ ಪೂಜಾ ಸಾಮಗ್ರಿಗಳನ್ನು ದಿನಾಂಕ 26-12-2025 ರ ರಾತ್ರಿ ಅಪರಿಚಿತರು ಮೇಲ್ಚಾವಣಿಯ ಹಂಚು ತೆಗೆದು ಒಳನುಗ್ಗಿ ಕಳವು ಮಾಡಿದ್ದರು. ಈ ಕುರಿತು ಮಂಗಳವಾರ(ಜ.27)ದಂದು ಸುರತ್ಕಲ್ ಠಾಣೆಯಲ್ಲಿ ಅ.ಕ್ರ.170/2025 ಕಲಂ 331(4), 305(ಎ) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿ ಆಧರಿಸಿ ತನಿಖೆ ನಡೆಸಿ ವಾಜೀದ್ ಜೆ @ ವಾಜಿ(27) ಎಂಬಾತನನ್ನು ಬಂಧಿಸಿದರು. ವಿಚಾರಣೆಯಲ್ಲಿ ಕಳವು ಮಾಡಿದ ಹಿತ್ತಾಳೆ ಹಾಗೂ ತಾಮ್ರದ ಸಾಮಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬಾತನಿಗೆ ಮಾರಾಟ ಮಾಡಿರುವುದಾಗಿ ತಿಳಿದುಬಂದ ಹಿನ್ನೆಲೆಯಲ್ಲಿ ಮಂಗಳವಾರ(ಜ.27)ದಂದು ಸಯ್ಯದ್ ಆಲಿಯನ್ನು ಕೂಡ ಬಂಧಿಸಲಾಗಿದೆ.

ಆರೋಪಿ ವಾಜೀದ್ ಜೆ ಹಾಗೂ ಸಯ್ಯದ್ ಆಲಿ ಇಂದ ಬೆಳ್ಳಿಯ ಮಂತ್ರದೇವತೆಯ ಮೂರ್ತಿ, ಕಡ್ಸಲೆ, ಕೊಡೆ ಸೇರಿದಂತೆ ರೂಪಾಯಿ 1,95,000 ಮೌಲ್ಯದ ಬೆಳ್ಳಿ ಸಾಮಗ್ರಿ, ಹಿತ್ತಾಳೆ ಹಾಗೂ ತಾಮ್ರದ ಪೂಜಾ ಪರಿಕರಗಳು, ಟಿವಿ–ಸೆಟ್‌ಟಾಪ್ ಬಾಕ್ಸ್, ಎರಡು ಮೊಬೈಲ್ ಫೋನ್‌ಗಳು ಹಾಗೂ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.

ಪ್ರಮುಖ ಆರೋಪಿಯಾದ ವಾಜೀದ್ ಜೆ @ ವಾಜಿ ಮೇಲೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಕೊಲೆ ಯತ್ನ, ದರೋಡೆ, ಮನೆ ಕಳ್ಳತನ, ವಾಹನ ಕಳ್ಳತನ ಸೇರಿ ಅನೇಕ ಪ್ರಕರಣಗಳು ದಾಖಲಾಗಿದ್ದು, ಸುರತ್ಕಲ್ ಠಾಣೆಯಲ್ಲಿ ‘ಬಿ’ ರೌಡಿ ಶೀಟ್ ಮತ್ತು ಎಂಒಬಿ ತೆರೆಯಲಾಗಿದೆ.

ನ್ಯಾಯಾಲಯದ ದಸ್ತಗಿರಿ ವಾರಂಟ್ ಜಾರಿಯಲ್ಲಿದ್ದ ಈತನನ್ನು ಬುಧವಾರ(ಜ.28)ದಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

error: Content is protected !!