ಮಂಗಳೂರು: ರಾಜ್ಯಾದ್ಯಂತ ಜಿಐಎಸ್ ಆಧರಿತ ಮಾರ್ಗದರ್ಶಿ ದರವನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರಕಾರ, ನೋಂದಣಿ ಪದ್ಧತಿಯನ್ನು ಎರಡು ತಿಂಗಳೊಳಗೆ ಸಂಪೂರ್ಣ ಕಾಗದ ರಹಿತಗೊಳಿಸಲೂ ಯೋಚಿಸಿದೆ.

ಈ ಯೊಜನೆಯ ಅಡಿಯಲ್ಲಿ ಜನರು ದಾಖಲೆಪತ್ರ ಹಿಡಿದು ನೋಂದಣಿ ಕಚೇರಿಗೆ ಸುತ್ತಾಡುವ ಬದಲಿಗೆ ಆನ್‌ಲೈನ್ ಮೂಲಕವೇ ದಾಖಲೆಪತ್ರಗಳನ್ನು ಸಲ್ಲಿಸಿ, ಆಧಾರ್ ದೃಢೀಕರಣದ ಮೂಲಕ ಸಹಿ ವೆರಿಫೈ ಮಾಡಿಕೊಂಡು ದಾಖಲೆಗಳನ್ನು ನೇರವಾಗಿ ತಮ್ಮ ಡಿಜಿಲಾಕರ್‌ಗಳಿಗೆ ಇಳಿಸಿಕೊಳ್ಳಬಹುದಾಗಿದೆ.

ಈ ಪೇಪರ್ ಲೆಸ್ ಸೇವೆಗಾಗಿ ಕಾವೇರಿ 2.0 ತಂತ್ರಾಂಶವನ್ನು ಸಜ್ಜು ಗೊಳಿಸಲಾಗುತ್ತಿದೆ. ಇನ್ನುಮುಂದೆ ನೋಂದಣಿಯಾದ ಅನಂತರದಲ್ಲಿ ದಾಖಲೆ ಪತ್ರದ ಒರಿಜಿನಲ್ ಡಿಜಿಲಾಕರ್‌ನಲ್ಲಿ ಸಿಗಲಿದ್ದು, ಅಲ್ಲಿಂದಲೇ ಪತ್ರಗಳನ್ನು ಪಡೆದುಕೊಳ್ಳಬಹುದಾಗಿದೆ. ಜಮೀನು, ಮನೆ, ವಾಣಿಜ್ಯ ಕಟ್ಟಡ ಗಳಂತಹ ಸ್ಥಿರಾಸ್ತಿಗಳ ನೋಂದಣಿಗೆ ಬೇಕಾದ ಉಭಯ ಪಕ್ಷದವರ ವ್ಯವಹಾರವನ್ನೂ ಲಾಗಿನ್ ಮೂಲಕ ನೇರವಾಗಿ ಹಾಕಲಾಗುತ್ತದೆ.

ಇದನ್ನು ಸಬ್ ರಿಜಿಸ್ಟ್ರಾರ್‌ಗಳು ಪರಿಶೀಲಿಸಿ ಸರಿ ಇದ್ದಲ್ಲಿ ಆದನ್ನು ಪೇಮೆಂಟ್ ಗೇಟ್ ವೇ ಗೆ ಕಳಿಸುತ್ತಾರೆ. ಇದರ ಮೂಲಕ ನಿಗದಿತ ಮುದ್ರಾಂಕ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸುತ್ತಾರೆ. ಇದರ ಬಳಿಕ ಎರಡೂ ಪಕ್ಷದವರೂ ಆಧಾರ್ ಮೂಲಕ ತಮ್ಮ ಸಹಿಯನ್ನು ಇ-ವೆರಿಫೈ ಮಾಡಬೇಕು, ಆಧಾರ್ ಇಲ್ಲವಾದರೆ ಪ್ರತ್ಯೇಕ ಲಿಂಕ್ ಮೂಲಕ ಇ-ಸಹಿ ಮಾಡಬೇಕು. ಅಲ್ಲಿಗೆ ಪ್ರಕ್ರಿಯೆ ಮುಕ್ತಾಯವಾಗುತ್ತದೆ. ಇಲ್ಲಿ ಅಂತಿಮಗೊಳ್ಳುವ ದಾಖಲೆ ಡಿಜಿ ಲಾಕರ್‌ನಲ್ಲಿ ಇರುತ್ತದೆ. ಇದನ್ನು ಡೌನ್‌ಲೋಡ್ ಮಾಡಲೂ ವಿಶಿಷ್ಟ ದಾಖಲೆ ಸಂಖ್ಯೆಯನ್ನೂ ಗ್ರಾಹಕರಿಗೆ ನೀಡಲಾಗುತ್ತದೆ.
ಪ್ರಸ್ತುತ ಅಂತಿಮ ಹಂತದಲ್ಲಿ ಫೋಟೊ ತೆಗೆಯುವ ಪ್ರಕ್ರಿಯೆಗಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರಬೇಕಾಗುತ್ತದೆ. ಮುಂದೆ ಅದೂ ಕೂಡ ಆನ್‌ಲೈನ್ ಮೂಲಕವೇ ಆಗುವ ಸಾಧ್ಯತೆಗಳಿವೆ.