ಕಾರವಾರ: “ಅವಧಿ ಮೀರಿದ ಮಾತ್ರೆ ನೀಡಿದರು” ಎಂಬ ಆರೋಪದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಕ್ಕೆ ಮನೋವೈಕಲ್ಯಕ್ಕೆ ಒಳಗಾಗಿ ವೈದ್ಯರೊಬ್ಬರು ಡಬಲ್ ಬ್ಯಾರಲ್ ಗನ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರು ಕಾರವಾರದ ಪಿಕಳೆ ನರ್ಸಿಂಗ್ ಹೋಂನಲ್ಲಿ ಸಹಾಯಕ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೀವ್ ಪಿಕಳೆ. ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಹಟ್ಟಿಕೇರಿಯಲ್ಲಿ ಈ ದಾರುಣ ಘಟನೆ ಸಂಭವಿಸಿದೆ.

ಇದೀಗ ವೈದ್ಯರ ಸಾವಿಗೆ ಕಾರಣವಾದ ವಿಡಿಯೋ ವೈರಲ್ ಪ್ರಕರಣದಲ್ಲಿ ಕಾರವಾರ ತಾಲೂಕಿನ ವೈಲವಾಡ ಗ್ರಾಮದ ಸುಭಾಷ್, ಹರಿಶ್ಚಂದ್ರ ಮತ್ತು ಅನಿಲ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಂಕೋಲಾ ಠಾಣಾ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಹದಿನೈದು ದಿನಗಳ ಹಿಂದೆ ಪಿಕಳೆ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆದಿದ್ದ ರೋಗಿಯೊಬ್ಬನಿಗೆ ಅವಧಿ ಮೀರಿದ ಮಾತ್ರೆ ನೀಡಲಾಗಿದೆ ಎಂದು ಆರೋಪಿಸಿ, ರೋಗಿಯ ಸಂಬಂಧಿಕರು ವೈದ್ಯ ರಾಜೀವ್ ಪಿಕಳೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. “ನಿರ್ಲಕ್ಷ್ಯದಿಂದ ರೋಗಿಯ ಜೀವಕ್ಕೆ ಅಪಾಯ ತಂದಿದ್ದೀರಿ” ಎಂದು ಆರೋಪಿಸಿ ವಿಡಿಯೋ ಚಿತ್ರೀಕರಣ ನಡೆಸಲಾಗಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಈ ವೇಳೆ ಜೀವ ಬೆದರಿಕೆಯ ಮಾತುಗಳೂ ಕೇಳಿಬಂದಿದ್ದವು.

ಈ ಕುರಿತು ರಾಜೀವ್ ಪಿಕಳೆ ಅವರು ಇದು ಅಜಾಗರೂಕತೆಯಿಂದ ನಡೆದ ಪ್ರಮಾದ ಎಂದು ಒಪ್ಪಿಕೊಂಡು, ಕ್ಷಮೆಯಾಚನೆ ಮಾಡಿದ್ದರು. ಆದರೆ ವಿಡಿಯೋ ವೈರಲ್ ಆದ ಬಳಿಕ ಸಾರ್ವಜನಿಕ ಅವಮಾನ, ಸಾಮಾಜಿಕ ಒತ್ತಡ ಹಾಗೂ ಮಾನಸಿಕ ಖಿನ್ನತೆ ಅವರಿಗೆ ತೀವ್ರವಾಗಿ ಕಾಡತೊಡಗಿತ್ತು.
ಶುಕ್ರವಾರ ಬೆಳಿಗ್ಗೆ ಮನೆಯಲ್ಲಿದ್ದ ರಾಜೀವ್ ಪಿಕಳೆ, ತಮ್ಮ ಸ್ವರಕ್ಷಣೆಗೆ ಇಟ್ಟುಕೊಂಡಿದ್ದ ಡಬಲ್ ಬ್ಯಾರಲ್ ಗನ್ ಬಳಸಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಮನೆ ಕೆಲಸಕ್ಕೆ ಬರುವ ಮಹಿಳೆ ಬೆಳಿಗ್ಗೆ ಮನೆಗೆ ಬಂದಾಗ, ರಕ್ತದ ಮಡುವಿನಲ್ಲಿ ತಲೆ ಒಡೆದುಕೊಂಡು ಬಿದ್ದಿದ್ದ ರಾಜೀವ್ ಪಿಕಳೆಯ ಶವ ಕಂಡು ಬೆಚ್ಚಿಬಿದ್ದಿದ್ದಾರೆ.

ಈ ಘಟನೆ ಒಂದು ವಾರದ ಹಿಂದೆ ಕೇರಳದಲ್ಲಿ ನಡೆದ ಹೋಲುವ ಘಟನೆಯನ್ನು ನೆನಪಿಸುತ್ತದೆ. ಬಸ್ಸಿನಲ್ಲಿ ಕಿರುಕುಳ ಆರೋಪಿಸಿ ಯುವಕನ ಕುರಿತು ವೈರಲ್ ಮಾಡಲಾದ ವಿಡಿಯೋದಿಂದ ಮನನೊಂದ ಯುವಕ ದೀಪಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಅದು ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು.