ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಪೊರೇಟರ್ ಕೊಟ್ಟ ದೂರಿನ ಮೇಲೆ ಬಿಜೆಪಿ ಮಹಿಳಾ ಕಾರ್ಯಕರ್ತೆಯ ಬಂಧನದ ವೇಳೆ ಬಟ್ಟೆ ಬಿಚ್ಚಿಕೊಳ್ಳುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸರು ವಶಕ್ಕೆ ಪಡೆದು ಬಂಧಿಸುವಾಗ ಆಕೆ ಬೆತ್ತಲೆ ಆಗಿರಲಿಲ್ಲ, ವ್ಯಾನ್ ಹತ್ತಿದ ಬಳಿಕ ಬಟ್ಟೆ ಆಕೆಯೇ ಬಿಚ್ಚಿ ಸೀನ್ ಕ್ರಿಯೇಟ್ ಮಾಡಿದ್ದಾಳೆ. ಹೊಸ ವರ್ಷದಲ್ಲಿ ಹೊರತುಪಡಿಸಿ 2020 ರಿಂದ ಬಂಧಿತ ಮಹಿಳೆ ಮೇಲೆ 5 ಪ್ರಕರಣ ದಾಖಲಾಗಿದ್ದವು. ಅದರಲ್ಲಿ ಧಾರವಾಡ ವಿದ್ಯಾಗಿರಿಯಲ್ಲಿ ಒಂದು ಮತ್ತು ಇದೇ ಕೇಶ್ವಾಪುರ ಠಾಣೆಯಲ್ಲಿ 4 ಕೇಸ್ ದಾಖಲಾಗಿದ್ದವು. ಈ ವರ್ಷ 4 ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದ್ದಾರೆ.

ಈ ಹಿಂದಿನ ಪ್ರಕರಣಗಳಲ್ಲಿ ಮಹಿಳೆಯ ನಡವಳಿಕೆಗಳ ಬಗ್ಗೆ ಮಾಹಿತಿದ್ದ ಕೇಶ್ವಾಪುರ ಪೊಲೀಸರು ಮಹಿಳೆಯನ್ನು ಬಂಧಿಸಲು ಹೆಚ್ಚುವರಿ ಮಹಿಳಾ ಸಿಬ್ಬಂದಿಯನ್ನು ಕರೆಸಿಕೊಂಡಿದ್ದರು. ಪೊಲೀಸರು ವಶಕ್ಕೆ ಪಡೆದು ಬಂಧಿಸುವಾಗ ಆಕೆ ಬೆತ್ತಲೆ ಆಗಿರಲಿಲ್ಲ, ವ್ಯಾನ್ ಹತ್ತಿದ ಬಳಿಕ ಬಟ್ಟೆ ಆಕೆಯೇ ಬಿಚ್ಚಿದ್ದಾಳೆ. ಮಹಿಳೆ ಹಾಗೂ ಪುರುಷ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.
ಮತಪಟ್ಟಿ ಪರಿಷ್ಕರಣೆಗೆ ಹೋದಾಗ ಸ್ಥಳೀಯರ ನಡುವೆ ನಡೆದ ಸಂಘರ್ಷ ದ್ವೇಷದ ರೂಪಕ್ಕೆ ಬದಲಾಗಿದೆ, ಗಲಾಟೆಯೂ ನಡೆದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ ನಂತರ ದೂರು ದಾಖಲಾಗುತ್ತಾ ಹೋಗಿವೆ. ಇದೇ ವೇಳೆ ಸ್ಥಳೀಯರಾದ ಪ್ರಶಾಂತ್ ಬೊಬ್ಬಾಜಿ ಅವರು ನೀಡಿದ ದೂರು ಆಧರಿಸಿ ಕೇಸ್‌ನ ಪ್ರಮುಖ ಆರೋಪಿಯಾಗಿದ್ದ ಮಹಿಳೆಯನ್ನ ಬಂಧಿಸಲಾಗಿದೆ. ಮಹಿಳೆಯೊಬ್ಬರಿಗೆ ಕತ್ತು ಹಿಸುಕಲು ಹೋಗಿದ್ದು, ಖಾಸಗಿ ಅಂಗಕ್ಕೆ ಹೊಡೆದಿದ್ದು, ಸಾಕ್ಷ್ಯ ಸಿಕ್ಕದ ಮೇಲೆ ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮಹಿಳೆಯನ್ನ ವ್ಯಾನ್ ಒಳಗೆ ಹತ್ತಿಸುತ್ತಿದ್ದಂತೆ ಆಕೆಯೇ ಖುದ್ದಾಗಿ ಬಟ್ಟೆಯನ್ನ ಬಿಚ್ಚಿದ್ದಾಳೆ. ಅಲ್ಲದೇ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾಳೆ. ಕಲಾವತಿ ಚಂದಾವರ್ಕರ್, ಶಕುಂತಲಾ, ರೇಖಾ ಮತ್ತು ಮಾರ್ಗರೇಟ್ ಅನ್ನುವವರಿಗೆ ಕಚ್ಚಿ ಘಾಸಿಗೊಳಿಸಿದ್ದಾಳೆ. ಓರ್ವ ಸಿಬ್ಬಂದಿಗೆ ಹೊಟ್ಟೆ ಭಾಗಕ್ಕೆ ರಕ್ತ ಬರುವಂತೆ ಕಚ್ಚಿದ್ದಾಳೆ. ಆದ್ರೆ ಈ ವಿಡಿಯೋ ಯಾರು ಮಾಡಿದ್ದಾರೆ ಗೊತ್ತಿಲ್ಲ. ವಿಡಿಯೋ ಮಾಡಿ ವೈರಲ್ ಮಾಡಿದವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಪೊಲೀಸರು ಮಾಡಿದ್ದರೆ, ಅರೆಸ್ಟ್ ಆದ ಮೇಲೆ ಮೆಡಿಕಲ್ ಮಾಡಿಸ್ತೀವಿ, ಆಗಲಾದ್ರೂ ವೈದ್ಯರ ಬಳಿ ಹೇಳೋಕೆ ಅವಕಾಶ ಇತ್ತು. ನಂತರ ಮ್ಯಾಜಿಸ್ಟ್ರೇಟ್ ಬಳಿಯೂ ಹೇಳಿಲ್ಲ. ಆಕೆ ಬಟ್ಟೆ ಬಿಚ್ಚಿದ್ದಾಗ ಪೊಲೀಸರೇ ಸ್ಥಳೀಯರ ಸಹಾಯದಿಂದ ಬೇರೆ ಬಟ್ಟೆ ಹಾಕಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಳೆ ವೈಷಮ್ಯವೇ ಘಟನೆಗೆ ಕಾರಣ
ಘಟನೆಗೆ ಹಳೇ ವೈಷಮ್ಯ ಕಾರಣವಾಗಿದೆ ಎನ್ನಲಾಗಿದೆ. ಕೆಶ್ವಾಪುರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಬೂತ್ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ ನಮ್ಮ ವೋಟ್ ಡಿಲೀಟ್ ಮಾಡಿಸಿದ್ದಾಗಿ ಗಲಾಟೆ ಮಾಡಿದ್ದರು. ಹಾಗಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇತ್ತು. ಇದೇ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರು. ಇದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿದೂರು ದಾಖಲಾಗಿತ್ತು. ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮಹಿಳೆಯನ್ನು ಬಂಧಿಸುವಾಗ ಈ ಡೈಡ್ರಾಮಾ ನಡೆದಿದೆ.