ಮಂಗಳೂರು: ದ.ಕ. ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ತಣ್ಣೀರುಬಾವಿ ಬೀಚ್‌ನಲ್ಲಿ ಜ.3 ಮತ್ತು 4ರಂದು ಸಂಜೆ ಮ್ಯೂಸಿಕ್ ಫೆಸ್ಟಿವಲ್, ಕೈಲಾಶ್ ಖೇರ್ ನೈಟ್, ವಿಜಯ ಪ್ರಕಾಶ್ ನೈಟ್ ಕಾರ್ಯಕ್ರಮಗಳು ನಡೆಯಲಿದೆ.

ಪೊಲೀಸ್ ಇಲಾಖೆಯು ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಕಾರ್ಯಕ್ರಮಗಳು ನಡೆಯುವ ಸಮಯ ಕುದುರೆಮುಖ ಜಂಕ್ಷನ್‌ನಿಂದ ತಣ್ಣೀರುಬಾವಿ ಬೀಚ್‌ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಸಾರ್ವಜನಿಕರು ತನ್ನ ವಾಹನಗಳನ್ನು ತಣ್ಣೀರುಬಾವಿ ಬೀಚ್ ರಸ್ತೆಯಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸುವುದು ಹಾಗೂ ಕಾರ್ಯಕ್ರಮ ಪ್ರಾರಂಭವಾಗುವ ಮುಂಚಿತವಾಗಿ ಬಂದು ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಬೇಕು ಎಂದು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.


ನಿಗದಿ ಪಡಿಸಿರುವ ಪಾರ್ಕಿಂಗ್ ಸ್ಥಳಗಳು: 1. ಫೀಜಾ ಕ್ರಿಕೆಟ್ ಗ್ರೌಂಡ್, ಡೆಲ್ಟಾ ಮೈದಾನ ಪಾರ್ಕಿಂಗ್, ರಫ್ತಾರ್ ಪಾರ್ಕಿಂಗ್, ಬೆಂಗ್ರೆ ತಣ್ಣೀರುಬಾವಿ ಮಸೀದಿ ಪಾರ್ಕಿಂಗ್ ಸ್ಥಳ, ಕಟ್ಟೆ ಗ್ರೌಂಡ್ ಪಾರ್ಕಿಂಗ್ ಸ್ಥಳ. ದೋಸ್ತ್ ಗ್ರೌಂಡ್, ಫಾತಿಮ ಚರ್ಚ್ ಪಾರ್ಕಿಂಗ್, ಎ.ಜೆ ಶೆಟ್ಟಿ ರವರ ಗ್ರೌಂಡ್. ಇನ್ನು ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಸುಲ್ತಾನ್ ಬತ್ತೇರಿಯಿಂದ ಫೇರಿಯನ್ನು ಬಳಸಬಹುದಾಗಿದೆ. ಕಾರ್ಯಕ್ರಮಗಳ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕರು ರಸ್ತೆಯಲ್ಲಿ ಅನಾವಶ್ಯಕವಾಗಿ ನಿಲ್ಲದೆ ಶಿಸ್ತನ್ನು ಕಾಪಾಡಬೇಕು. ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಲು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೂಚನೆ ನೀಡಿದ್ದಾರೆ.

