ಗುರುಪುರ: ಗುರುಪುರದ ವಜ್ರದೇಹಿ ಮಠದ ವಾರ್ಷಿಕ ‘ವಜ್ರದೇಹಿ ಜಾತ್ರೆ’ ಜನವರಿ 3ರಿಂದ 5ರವರೆಗೆ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರ ಮುಂದಾಳತ್ವದಲ್ಲಿ, ಬ್ರಹ್ಮಶ್ರೀ ಅರುಣ್ ಭಟ್ ಖಂಡಿಗೆ ಅವರ ಅಧ್ವರ್ಯುತನ(ನೇತೃತ್ವ)ದಲ್ಲಿ ಹಾಗೂ ವೇದಮೂರ್ತಿ ಪ್ರಜ್ವಲ್ ಭಟ್ ಬಿಜೈ ಅವರ ಯಾಜಮಾನತ್ವದಲ್ಲಿ ಭಕ್ತಿಭಾವದಿಂದ ನಡೆಯಲಿದೆ. ಪೂಜೆ–ಪುನಸ್ಕಾರ, ಧಾರ್ಮಿಕ ಸಭೆ, ದೈವಗಳ ನೇಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾತ್ರೆ ಅದ್ಧೂರಿಯಾಗಿ ಆಯೋಜಿಸಲಾಗಿದೆ.

ಜನವರಿ 3, ಶನಿವಾರ
ಬೆಳಿಗ್ಗೆ 6:00ಕ್ಕೆ ಸಾಮೂಹಿಕ ಪ್ರಾರ್ಥನೆ, ದ್ವಾದಶ ನಾರೀಕೇರ, ಶ್ರೀ ನರಸಿಂಹ ಸೂಕ್ತ ಹವನ, ಮನ್ಯಸೂಕ್ತ ಪುನಃಶ್ಚರಣ ಹವನ, ಕೂರ್ಮ ಮಹಾಸಾಲಿಗ್ರಾಮ ಮತ್ತು ಅನಂತ ಪದ್ಮನಾಭ ಮಹಾಸಾಲಿಗ್ರಾಮಕ್ಕೆ ಮಹಾಮಜ್ಜನ, ನವಕ ಕಲಶಾಭಿಷೇಕ, ಭಜನೆ, ಶ್ರೀ ದೇವರಿಗೆ ಸರ್ವಾಲಂಕಾರ ಪೂಜೆ ನಡೆಯಲಿದೆ.
ಮಧ್ಯಾಹ್ನ 2:00ರಿಂದ ಭಾಗವತ ಸಿದ್ದಕಟ್ಟೆ ಭರತ್ ಶೆಟ್ಟಿ, ತಂಡದಿಂದ ‘ಯಕ್ಷಭಜನೆ’, ಸಂಜೆ 4:00ರಿಂದ ಸಾಮೂಹಿಕ ಸತ್ಯನಾರಾಯಣ ವೃತ ಕಥಾಪೂಜೆ, ಸಂಜೆ 5:00ರಿಂದ ರಂಗ ಪೂಜೆ, ದೇವರ ಬಲಿ, ಕಟ್ಟೆಪೂಜೆ, ಅಷ್ಟಾವಧಾನ ಸೇವೆ ನಡೆಯಲಿದೆ.
ರಾತ್ರಿ 8:00ರಿಂದ ಮಂಗಳೂರಿನ ಶ್ರೀ ಲಲಿತೆ ಕಲಾವಿದರು (ರಿ.) ಅವರಿಂದ ʻಶನಿ ಮಹಾತ್ಮ’ ನಾಟಕ ಪ್ರದರ್ಶನಗೊಳ್ಳಲಿದೆ.

ಜ. 4ರ ಆದಿತ್ಯವಾರ
ಬೆಳಿಗ್ಗೆ 9:00ರಿಂದ ಹರಿನಾಮ ಸಂಕೀರ್ತನೆ ಹಾಗೂ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಯುವರಾಜ್ ಜೈನ್, ಋತ್ವಿಕ್ ಕದ್ರಿ, ಸಾಕ್ಷಾತ್ ಅಮೀನ್ ಚಕ್ರತೀರ್ಥ ಉಪಸ್ಥಿತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಬೆಳಿಗ್ಗೆ 10:00ರಿಂದ ಶ್ರೀ ನಾಗದೇವರಿಗೆ ಪಂಚಾಮೃತಾಭಿಷೇಕ ಮತ್ತು ಸಾಮೂಹಿಕ ಆಶ್ಲೇಷಾ ಬಲಿ ಪೂಜೆ, 11:30ರಿಂದ ಸರ್ವಾಲಂಕಾರ ಪೂಜೆ, ದೇವರ ಬಲಿ ಹೊರಟು ಪಲ್ಲ ಪೂಜೆ ನಡೆಯಲಿದೆ.
ಮಧ್ಯಾಹ್ನ 12:30ಕ್ಕೆ ಶ್ರೀ ವಜ್ರದೇಹಿ ಸ್ವಾಮೀಜಿ ಯವರ ಉಪಸ್ಥಿತಿ ಹಾಗೂ ವೇದಮೂರ್ತಿ ಹರಿನಾರಾಯಣದಾಸ ಆಸ್ರಣ್ಣ, ಡಾ| ಎಂ. ಮೋಹನ್ ಆಳ್ವ, ಬ್ರಿಜೇಶ್ ಚೌಟಿ, ಡಾ. ಭರತ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಎ. ಸುವರ್ಣ ಮತ್ತಿತರ ಗಣ್ಯಾತಿಗಣ್ಯರ ಪಾಲ್ಗೊಳ್ಳುವಿಕೆಯಲ್ಲಿ ‘ಧರ್ಮಸಭೆ’ ನಡೆಯಲಿದೆ.
ಈ ಸಂದರ್ಭದಲ್ಲಿ ಶಶಿಧರ ಶೆಟ್ಟಿ ಬರೋಡಾ, ಉಮೇಶ್ ಪಂಬದ ಗಂಧಕಾಡು ಮತ್ತು ಸಿಂಧೂ ಗುಜರನ್ ಅವರಿಗೆ ಸನ್ಮಾನ ಹಾಗೂ ಅರ್ಹರಿಗೆ ಸಹಾಯಹಸ್ತ ವಿತರಿಸಲಾಗುವುದು. ಮಧ್ಯಾಹ್ನ 2:00ರಿಂದ ವಿಠಲ ನಾಯಕ್ ಕಲ್ಲಡ್ಕ ಅವರಿಂದ ಗೀತಾ ಸಾಹಿತ್ಯ’ ಸಂಭ್ರಮ, ಸಂಜೆ 5:00ರಿಂದ ದೇವರ ಬಲಿ ಹೊರಟು ಕಟ್ಟೆಪೂಜೆ, ನೃತ್ಯ ಸೇವೆ, ಓಕುಳಿ, ಅವಭ್ರತ, ಪ್ರಸಾದ ವಿತರಣೆಯಾಗಲಿದೆ. ರಾತ್ರಿ 8:30ರಿಂದ ಲಕುಮಿ ತಂಡದ ಕುಸಾಲ್ಲ ಕಲಾವಿದರಿಂದ ‘ಆಂಟೀ ಬೊಕ್ಕ ಅಂಕಲ್’ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಜನವರಿ 5 ಸೋಮವಾರ
ಬೆಳಿಗ್ಗೆ 9:00ಕ್ಕೆ ಧರ್ಮದೈವಗಳ ಭಂಡಾರ ಏರಲಿದೆ. ಸಂಜೆ 7:00ರಿಂದ ಮೈಸಂದಾಯ ದೈವದ ನೇಮ, ರಾತ್ರಿ 9:30ಕ್ಕೆ ಶ್ರೀ ರಕ್ತಶ್ವರಿ ದೈವದ ನೇಮ, 10:00ರಿಂದ ಅಣ್ಣಪ್ಪ ದೈವದ ನೇಮ, ಧರ್ಮನುಡಿ, ಪ್ರಸಾದ ವಿತರಣೆ ಹಾಗೂ ಭಂಡಾರ ನಿರ್ಗಮನವಾಗಲಿದೆ.
ಮೂರು ದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆ ಜರುಗಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
