ಜ.4ರಂದು ಗುರುಪುರ ಕೈಕಂಬದಲ್ಲಿ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ

ಮಂಗಳೂರು: ಗುರುಪುರ ಕೈಕಂಬದ ಮೇಘಾ ಪ್ರಾಝಾ ಸಭಾಂಗಣದಲ್ಲಿ ಜ.4ರಂದು ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಹೆಚ್. ತಿಳಿಸಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಿಗ್ಗೆ 9.30ಕ್ಕೆ ಸಬೀಲುಲ್ ಹುದಾ ಅಲ್‌ಬಿರ್ ಶಾಲೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, 10 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. 10.15ಕ್ಕೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸಮ್ಮೇಳನ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು ಸಮ್ಮೇಳನಾಧ್ಯಕ್ಷರಾಗಿ ಭಾಷಣ ಮಾಡಲಿದ್ದಾರೆ ಎಂದರು.

ಸಮ್ಮೇಳನದಲ್ಲಿ ಬ್ಯಾರಿ ಸಾಹಿತ್ಯದ ಹಲವು ಕೃತಿಗಳ ಬಿಡುಗಡೆ, ಚರ್ಚಾಗೋಷ್ಠಿ, ಕವಿಗೋಷ್ಠಿ, ದಫ್ ಹಾಗೂ ಬ್ಯಾರಿ ಹಾಡುಗಳ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಸಾಧಕರಿಗೆ ಸನ್ಮಾನ ಹಾಗೂ ಬ್ಯಾರಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಉಮರ್ ಯು.ಹೆಚ್. ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಡಾ. ಇ.ಕೆ.ಎ. ಸಿದ್ದೀಕ್ ಅಡ್ಡರು, ಸದಸ್ಯ ಸಂಚಾಲಕ ತಾಜುದ್ದೀನ್ ಅಮ್ಮುಂಜೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಯು.ಹೆಚ್. ಖಾಲಿದ್ ಉಜಿರೆ ಹಾಗೂ ಅನ್ಸಾರ್ ಕಾಟಿಪಳ್ಳ, ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎಂ.ಜಿ. ಸಾಹುಲ್ ಹಮೀದ್ ಗುರುಪುರ ಮತ್ತು ಸಲೀಂ ಹಂಡೇಲ್, ಕಾರ್ಯದರ್ಶಿಗಳಾದ ಅಬ್ದುಲ್ ಜಲೀಲ್ ಅರಳ ಹಾಗೂ ಎಂ.ಡಿ. ನವಾಝ್ ಉಪಸ್ಥಿತರಿದ್ದರು.

error: Content is protected !!