
ಬೆಂಗಳೂರು: ಮದ್ಯದ ಅಮಲಿನಲ್ಲಿ ಮಾಲ್ ಆಫ್ ಏಷ್ಯಾ ಗೇಟ್ ನಂ.3ರ ಬಳಿ ಬುಧವಾರ ರಾತ್ರಿ 10.15ರ ಸುಮಾರಿಗೆ ಅತೀ ವೇಗವಾಗಿ ಹೊರ ಬಂದ ಕಾರು ಬ್ಯಾರಿಕೇಡ್‌ಗೆ ಗುದ್ದಿ ಬಳಿಕ ನಾಲ್ವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಸಂಜಯ್ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಕೊಡಿಗೇಹಳ್ಳಿ ಅಕ್ಕಮ್ಮ,ಚಂದ್ರಶೇಖರ್, ರಾಜಲಕ್ಷ್ಮೀ, ಪ್ರಜ್ವಲ್ ಎಂಬುವರು ಗಾಯಗೊಂಡಿದ್ದಾರೆ.
ಈ ಸಂಬಂಧ ಚಾಲಕ ಸುನಿಲ್ ಕುಮಾರ್‌ಸಿಂಗ್ (48) ಹಾಗೂ ಮಾಲ್ ಆಫ್ ಏಷ್ಯಾದ ಭದ್ರತಾ ವಿಭಾಗದ ಉಸ್ತುವಾರಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಸಂಜಯ್ ನಗರ ಸಂಚಾರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಾಹನವನ್ನು ಜಪ್ತಿ ಮಾಡಿದ್ದಾರೆ.
ಮಾಲ್ ಆಫ್ ಏಷ್ಯಾ ಆವರಣದಿಂದ ಅತಿವೇಗವಾಗಿ ಬಂದ ಮಹೀಂದ್ರ ಎಕ್ಸ್‌ಯುವಿ-700 ಕಾರು ಮೊದಲು ಪಾದಚಾರಿ ಮಾರ್ಗಕ್ಕೆ ಅಳವಡಿಸಿದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ. ನಂತರ ಪಾದಚಾರಿ ಮಾರ್ಗದಲ್ಲಿ ತೆರಳುತ್ತಿದ್ದ ನಾಲ್ವರಿಗೂ ಗುದ್ದಿದೆ. ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಚಾಲಕ ಮದ್ಯದ ಅಮಲಿನಲ್ಲಿ ಪಾದಚಾರಿ ಮಾರ್ಗಕ್ಕೆ ಕಾರು ಹತ್ತಿಸಿದ್ದಾನೆ. ಚಾಲಕ ಸುನಿಲ್ ಕುಮಾರ್‌ಹಾಗೂ ಮಾಲ್‌ಗೆ ಬರುವವರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಮಾಲ್ ಆಫ್ ಏಷ್ಯಾದ ಭದ್ರತಾ ವಿಭಾಗದ ಉಸ್ತುವಾರಿ ವಿರುದ್ಧ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.