ವಫಾ ಲಕ್ಕಿ ಸ್ಕೀಂನಿಂದ ಸಾವಿರಾರು ಮಂದಿಗೆ ಟೋಪಿ; ಮಾಲಕ ದುಬೈಗೆ ಪರಾರಿ ಸೀಸನ್‌ 5-6 ಗ್ರಾಹಕರಿಗೆ ಹಣ–ಗಿಫ್ಟ್ ಬಾಕಿ ಇಟ್ಟುಕೊಂಡೇ ಸೀಸನ್‌ 7 ಆರಂಭ: ಇದುವರೆಗೆ 25 ಮನೆ ಕೊಡಲು ಬಾಕಿ!

ಮಂಗಳೂರು: ವಫಾ ಲಕ್ಕಿ ಸ್ಕೀಂ ಹೆಸರಿನಲ್ಲಿ ಸಾವಿರಾರು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚನೆ ನಡೆಸಿದ ಆರೋಪ ಎದುರಿಸುತ್ತಿರುವ ಅಬ್ದುಲ್ ವಹಾಬ್ ಕುಳಾಯಿ ಇದೀಗ ದುಬೈಗೆ ಪರಾರಿಯಾಗಿದ್ದಾನೆ ಎನ್ನುವ ಆರೋಪ ಏಜೆಂಟ್ ಗಳಿಂದಲೇ ಕೇಳಿಬಂದಿದೆ. ಸೀಸನ್‌ 5ರ ಸುಮಾರು 7 ಸಾವಿರ ಗ್ರಾಹಕರಿಗೆ ಗಿಫ್ಟ್ ಅಥವಾ ಹಣ ನೀಡದೇ ಬಾಕಿ ಇಟ್ಟುಕೊಂಡಿರುವ ವಹಾಬ್, ಸೀಸನ್‌ 6ರ ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಸೀಸನ್‌ 5ರ ಗ್ರಾಹಕರಿಗೆ ನೀಡುತ್ತಿರುವುದಾಗಿ ಆರೋಪಿಸಲಾಗಿದೆ. ಹಿಂದಿನ ಎರಡು ಸೀಸನ್‌ಗಳಲ್ಲಿ ಗ್ರಾಹಕರಿಗೆ ಮೋಸ ಮಾಡಿ, ಇದೀಗ ಕೇರಳದ ಪಯ್ಯನ್ನೂರಿನಲ್ಲಿ ಸೀಸನ್‌ 7 ಆರಂಭಿಸಿ ಅಲ್ಲಿನ ಜನರ ಕಿವಿಗೆ ಹೂ ಇಡಲು ಆರಂಭಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

y
ಸೀಸನ್‌ 5 ಜುಲೈ 5ರಂದು ಮುಕ್ತಾಯಗೊಂಡಿದ್ದು, ಆಗಸ್ಟ್‌ನಲ್ಲಿ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿ 2025ರ ಆಗಸ್ಟ್‌ 15ರಂದು ಕುಕ್ಕಾಡಿ ಸಮೀಪ ಗೋಲ್ಡ್ ಶಾಪ್ ಆರಂಭಿಸಲಾಗಿತ್ತು. ಆದರೆ ಗ್ರಾಹಕರು ತಮಗೆ ಮೋಸವಾಗಿರುವುದಾಗಿ ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪೊಲೀಸರು ಆ ಮಳಿಗೆಯನ್ನು ಬಂದ್ ಮಾಡಿದ್ದರು. ವಹಾಬ್‌ನನ್ನು ಬಂಧಿಸಲು ಪೊಲೀಸರು ಮುಂದಾದಾಗ ಆತ ಮಣಿಪಾಲಕ್ಕೆ ತೆರಳಿ ಅಲ್ಲಿಂದ ದುಬೈಗೆ ಪರಾರಿಯಾಗಿದ್ದನು. ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆತ ಬಳಿಕ ಕೇರಳದ ಪಯ್ಯನ್ನೂರಿನ ತನ್ನ ಬ್ರಾಂಚಿಗೆ ಬಂದು ಮತ್ತೆ ದುಬೈಗೆ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ.

ಮೊದಲು ನ್ಯೂಶೈನ್ ಸಂಸ್ಥೆಯೂ ವಫಾ ಸ್ಕೀಂನಲ್ಲಿ ಪಾಲುದಾರರಾಗಿದ್ದು, ಇದು ಮುಳುಗಡೆಯಾಗಿತ್ತು. ನ್ಯೂಶೈನ್ ಸಂಸ್ಥೆಯವರು ವಫಾ ಸ್ಕೀಂ ತನಗೆ 1 ಕೋಟಿ 90 ಲಕ್ಷ ರೂ. ನೀಡಬೇಕಿದೆ ಎಂದು ಪೊಲೀಸ್ ಠಾಣೆಗೆ ದಾಖಲೆ ಸಲ್ಲಿಸಿದ್ದರು. ಹಾಗಾಗಿ ನ್ಯೂಶೈನ್‌ ಮುಳುಗಲು ವಫಾವೇ ಕಾರಣ ಎನ್ನುವುದು ಸ್ಪಷ್ಟವಾಗಿತ್ತು. ಸೀಸನ್‌ 5ರಲ್ಲಿ ಇಬ್ಬರೂ ಒಟ್ಟಿಗೆ ಕಾರ್ಯನಿರ್ವಹಿಸಿದ್ದರು. ವಫಾ ವಿರುದ್ಧ ಎಫ್‌ ಐಆರ್ ದಾಖಲಾದರೆ ತಕ್ಷಣ ವಹಾಬ್ ನಿರೀಕ್ಷಣಾ ಜಾಮೀನು ಪಡೆದು ಕೇರಳದಲ್ಲೇ ಉಳಿದುಕೊಂಡು ಅಲ್ಲಿಂದ ದುಬೈಗೆ ಹಾರಿದ್ದಾನೆ ಎಂದು ಹೇಳಲಾಗುತ್ತಿದೆ.

 

ಈವರೆಗೆ ಒಟ್ಟು 25 ಗ್ರಾಹಕರಿಗೆ ಮನೆ ನೀಡಲು ಬಾಕಿ ಇದೆ. ಸೀಸನ್‌ 5ರಲ್ಲಿ 4 ಮನೆ, ಸೀಸನ್‌ 6ರಲ್ಲಿ 15 ಮನೆ ಹಾಗೂ ಸೀಸನ್‌ 7ರಲ್ಲಿ 5 ಮನೆಗಳು ಇನ್ನೂ ಬಾಕಿ ಉಳಿದಿವೆ. ಸೀಸನ್‌ 6ರಲ್ಲಿ ಎರಡು 1 ಬಿ.ಎಚ್.ಕೆ ಯ 2 ಬಿ.ಎಚ್.ಕೆ ಮನೆಗಳನ್ನೂ ನೀಡಬೇಕಿದೆ. ಗ್ರಾಹಕರಿಂದ ಸುಮಾರು 60 ಲಕ್ಷ ರೂ. ಸಂಗ್ರಹಿಸಿದರೂ ಕೇವಲ 30 ಲಕ್ಷ ರೂ. ಮೌಲ್ಯದ ಗೋಲ್ಡ್ ರಿಂಗ್‌ಗಳನ್ನು ಸರ್ಪ್ರೈಸ್ ಗಿಫ್ಟ್ ಎಂದು ವಿತರಿಸಿ ಗ್ರಾಹಕರ ಕಿವಿಗೆ ಹೂ ಇಡುತ್ತಿದ್ದಾನೆ. ಸೀಸನ್‌ ಮುಗಿದ ಬಳಿಕ 20 ಸಾವಿರ ಮೌಲ್ಯದ ಗಿಫ್ಟ್‌ ಅಥವಾ ಹಣ ನೀಡಬೇಕಿದ್ದು, ಅದೆಲ್ಲಾ ಬಾಕಿ ಉಳಿದಿದೆ ಎನ್ನಲಾಗಿದೆ.

ಇಷ್ಟೆಲ್ಲ ಆದ ಬಳಿಕವೂ ಸೀಸನ್‌ ಮುಂದುವರಿದಿದ್ದು, ಏಜೆಂಟರು ಹಣ ಸಂಗ್ರಹಿಸುತ್ತಲೇ ಇದ್ದಾರೆ. ಈ ಹಣ ಸೌದಿಗೆ ಹೋಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಕೇರಳದ ಪಯ್ಯನ್ನೂರಿನಲ್ಲಿ ಸೀಸನ್‌ 7 ನಡೆಸಲಾಗಿದೆ. ಕಿನ್ನಗೋಳಿ ಸಮೀಪದ ಪದ್ಮನ್ನೂರು ಬಳಿ ಮನೆ ಕಟ್ಟಿಕೊಡುವುದಾಗಿ ಗ್ರಾಹಕರಿಗೆ ನಂಬಿಸಲಾಗಿದೆ. ಆದರೆ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಈ ಜಾಗ ಕೋರ್ಟ್ ವ್ಯಾಜ್ಯದಲ್ಲಿರುವುದರಿಂದ ಮನೆ ದೊರೆಯುವ ಸಾಧ್ಯತೆ ಅನುಮಾನಾಸ್ಪದವಾಗಿದೆ.

ವಫಾ ಸಂಸ್ಥೆಯ ಎಲ್ಲಾ ಮಳಿಗೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸ್ವಂತ ಆಸ್ತಿ ಇಲ್ಲವೆನ್ನಲಾಗಿದೆ. ಹಾಗಾಗಿ ಈತನ ಆಸ್ತಿಯನ್ನು ಜಪ್ತಿ ಮಾಡಿ ಗ್ರಾಹಕರಿಗೆ ಹಣ ಕೊಡಲು ಸಾದಯವಾಗುತ್ತಿಲ್ಲ. ತಿಂಗಳಿಗೆ ಕೋಟ್ಯಂತರ ರೂ. ಸಂಗ್ರಹವಾಗುತ್ತಿದ್ದರೂ, ಸೀಸನ್‌ 5ರ ನೂರಾರು ಗ್ರಾಹಕರ ಚೆಕ್‌ಗಳು ಬೌನ್ಸ್ ಆಗಿವೆ. ಡ್ರಾಗಳನ್ನು ನಿಗೂಢ ಸ್ಥಳದಲ್ಲಿ ನಡೆಸಿ ಲೈವ್ ಪ್ರಸಾರ ಮಾಡಲಾಗುತ್ತಿದ್ದು, ತಮ್ಮ ಸ್ಥಳ ಬಹಿರಂಗವಾದರೆ ದಾಳಿ ಸಂಭವಿಸಬಹುದು ಎಂಬ ಭಯವೇ ಇದಕ್ಕೆ ಕಾರಣ ಎನ್ನಲಾಗಿದೆ.

ಸುರತ್ಕಲ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಮೋದ್ ಅವರು ಎಫ್‌ಐಆರ್ ದಾಖಲಿಸಿ ಬಂಧಿಸುವ ಸಾಧ್ಯತೆ ಇರುವುದರಿಂದ ವಹಾಬ್ ಸುರತ್ಕಲ್‌ಗೆ ಕಾಲಿಡುತ್ತಿಲ್ಲ ಎಂಬ ಮಾತು ಕೂಡ ಕೇಳಿಬಂದಿದೆ. ಸಂಗ್ರಹಿಸಿದ ಹಣದ ಜವಾಬ್ದಾರಿ ಯಾರ ಮೇಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಜೆಂಟರು ಮಾತ್ರ ಹಣ ಸಂಗ್ರಹಿಸಿ ಆತನ ದುಬೈ ಅಕೌಂಟಿಗೆ ಹಾಕುತ್ತಿದ್ದಾರೆ. ಸುಮಾರು 70–80 ಏಜೆಂಟರು ಇನ್ನೂ ಕಾರ್ಯನಿರ್ವಹಿಸುತ್ತಿದ್ದು, ಇವರ ಸಂಗ್ರಹದ ಹಣದಿಂದ ಆತ ದುಬೈಯಲ್ಲಿ ಎಂಜಾಯ್‌ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಸೌದಿಯಲ್ಲಿ ಕಂಪೆನಿ ಇದೆ ಎಂದು ಸುಳ್ಳು ಹೇಳಿ ಸ್ಕೀಂ ನಡೆಸುತ್ತಿದ್ದಾನೆ ಎನ್ನುವ ಆರೋಪ ವಹಾಬ್‌ ಮೇಲಿದೆ.

error: Content is protected !!