ಹೊಸದಿಲ್ಲಿ: ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಇಬ್ಬರು ಆಟಗಾರರು 2025ರಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ರೋ-ಕೊ ಜೋಡಿಯ ಬ್ಯಾಟಿಂಗ್ ಫಾರ್ಮ್, ಇವರ ಫಿಟ್ನೆಸ್ ಎಲ್ಲವೂ ಇಲ್ಲಿ ಗಣನೆಗೆ ಬರಲಿದೆ. ಇದಕ್ಕೂ ಮಿಗಿಲಾಗಿ 2026ರಲ್ಲಿ ಇವರಿಗೆ ಎಷ್ಟು ಏಕದಿನ ಪಂದ್ಯಗಳನ್ನಾಡುವ ಅವಕಾಶ ಲಭಿಸಲಿದೆ ಎಂಬುದೂ ಮುಖ್ಯ.
ಈಗಿನ ವೇಳಾಪಟ್ಟಿ ಪ್ರಕಾರ ಭಾರತ 2026ರಲ್ಲಿ 18 ಏಕದಿನ ಪಂದ್ಯಗಳನ್ನಾಡಲಿದೆ. ಇವೆಲ್ಲವೂ ತಲಾ 3 ಪಂದ್ಯಗಳ 6 ಸರಣಿಗಳಾಗಿವೆ. ನ್ಯೂಜಿಲ್ಯಾಂಡ್ ವಿರುದ್ಧ 2 , ಅಫ್ಘಾನಿಸ್ಥಾನ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಒಂದೊಂದು ಸರಣಿಯನ್ನಾಡಲಿದೆ. ಇದರಲ್ಲಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಅವರದೇ ನೆಲದಲ್ಲಿ ಒಂದೊಂದು ಸರಣಿ ನಡೆಯಲಿದೆ.
ರೋಹಿತ್ ಹಾಗೂ ಕೊಹ್ಲಿ ಈ ಎಲ್ಲ ಸರಣಿಗಳಲ್ಲೂ ಆಡುವ ಸಾಧ್ಯತೆ ಇಲ್ಲ. ಆದರೆ ಕನಿಷ್ಠ 12ರಿಂದ 15 ಪಂದ್ಯಗಳನ್ನು ಆಡುವುದರಲ್ಲಿ ಅನುಮಾನವಿಲ್ಲ.