ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆ ದ.ಕ. ಜಿಲ್ಲಾ ವಾರ್ಷಿಕೋತ್ಸವ, ಸಾಧಕರಿಗೆ ಗೌರವ ಸನ್ಮಾನ

ಮಂಗಳೂರು: ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮವು ನಗರದ ಅತ್ತಾವರ ವೈದ್ಯನಾಥ ನಗರದಲ್ಲಿರುವ ಮೇನಕುಲಂಜಿ ಸಭಾಭವನದಲ್ಲಿ ಭಾನುವಾರ ನಡೆಯಿತು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಶಿವರಾಜ್ ಅಯ್ಯರ್ ವಹಿಸಿದ್ದರು. ನಿರ್ದೇಶಕರಾದ ಸದಾಶಿವ್ ಅತಿಥಿಗಳನ್ನು ಸ್ವಾಗತಿಸಿದರು. ಬೆಳ್ಳಾರಿ ಜಿಲ್ಲಾ ಆಸ್ಪತ್ರೆ ಮಂಗಳೂರಿನ ಜಿಲ್ಲಾ ಶಾಸ್ತ್ರಜ್ಞ ಹಾಗೂ ಅಧೀಕ್ಷಕರಾದ ಡಾ. ಶಿವಪ್ರಕಾಶ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಡಾ. ಶಿವಪ್ರಕಾಶ್, ಮಾನವೀಯತೆ, ಪ್ರೀತಿ ಹಾಗೂ ವಿಶ್ವಾಸದ ಮೇಲೆ ನಿಂತಿರುವ ಇಂತಹ ಸಂಸ್ಥೆಗಳು ಇನ್ನಷ್ಟು ಬೆಳೆಯಬೇಕು ಮತ್ತು ಉಳಿಯಬೇಕು. ಅಸಹಾಯಕರಿಗೆ ನೆರವಾಗುವ ಸೇವೆ ಅತ್ಯಂತ ಪುಣ್ಯದ ಕೆಲಸವಾಗಿದ್ದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸಮಾಜಸೇವೆಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ ಮಾತನಾಡಿ, ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎಸ್.ಆರ್. ನಾಯಕರ ಪ್ರೇರಣೆ ಮತ್ತು ಬೆಂಬಲದಿಂದ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದರು. ಆರ್ಥಿಕ ಸವಾಲುಗಳು ಹಾಗೂ ಲಾಭದಾಸೆಯಿಲ್ಲದ ಶುದ್ಧ ಸಮಾಜಸೇವೆಯ ದೃಷ್ಟಿಕೋನದ ಕಾರಣ ಕೆಲವೊಮ್ಮೆ ಸದಸ್ಯರು ಹಿಂದೆ ಸರಿದಿದ್ದು, ಇದರಿಂದ ಸಂಸ್ಥೆಯ ಬೆಳವಣಿಗೆಯ ವೇಗ ಕುಂಠಿತವಾಯಿತು ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ. ಶೇಷಪ್ಪ ಬಂಬಿಳ, ಸಂಸ್ಥೆಯ ಹುಟ್ಟು, ಉದ್ದೇಶ ಹಾಗೂ ಕಳೆದ 23 ವರ್ಷಗಳ ಸೇವಾ ಪಥವನ್ನು ವಿವರಿಸಿದರು. ಕಳೆದ ಮೂರು ವರ್ಷಗಳಿಂದ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತಿದ್ದು, ಸಮಾಜದ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಿ ಸಾವಿರಾರು ಅಸಹಾಯಕರಿಗೆ ನೆರವಾಗಲು ಸಾಧ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜಸೇವಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೇಕ್ ಸಮ್ ಒನ್ ಗ್ರೂಪ್ (ಕಾರ್ಕಳ) ಹಾಗೂ ಶ್ರೀ ಉಗ್ಗಪ್ಪ ಪೂಜಾರಿ (ರಂಜಗಿರಿ ನಾಟಿ ವೈದ್ಯರು) ಅವರಿಗೆ ಸಂಸ್ಥೆಯ ಸ್ಥಾಪಕ ಅಧ್ಯಕ್ಷರ ಹೆಸರಿನಲ್ಲಿ ‘ಕೊಲ್ಲಾಡಿ ಬಾಲಕೃಷ್ಣ ರೈ ಸಾಧನಾ ಪ್ರಶಸ್ತಿ’ ಪ್ರದಾನಿಸಲಾಯಿತು. ಅದೇ ರೀತಿ ಬಾಲ್ಯದಿಂದಲೇ ಭರತನಾಟ್ಯ, ಜಾನಪದ ಹಾಗೂ ಪಾಶ್ಚಾತ್ಯ ನೃತ್ಯಗಳಲ್ಲಿ ಸಾಧನೆ ಮಾಡಿ, ‘ಚಿನ್ನದ ಚಿಲಿಪಿಲಿ’, ‘ಚಿಗುರು ಜೂನಿಯರ್’, ‘ಮಸ್ತಿ ಆಳ್ವಾಸ್’, ‘ಸಿರಿ ಜೆಸಿ’, ‘ಜೀ ಕನ್ನಡ ಡ್ರಾಮಾ ಜೂನಿಯರ್’ ಮತ್ತು ‘ಕರ್ನಾಟಕ ಸೀಸನ್–2’ನಲ್ಲಿ ‘ಮಹಾನಟಿ ಚಿನ್ನದ ಕಿರೀಟ’ ಪಡೆದ ಕುಮಾರ ವಂಶಿ ರತ್ನಾಕರ್ ಅವರಿಗೆ ‘ಕಲಾ ಸರಸ್ವತಿ’ ಬಿರುದಿನೊಂದಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಾತನಾಡಿದ ಬಿಂದುಸಾರ ಶೆಟ್ಟಿ, ಶೋಷಿತ ಮತ್ತು ಅನ್ಯಾಯಕ್ಕೊಳಗಾದವರ ಪರ ನಿಲ್ಲಲು ಧೈರ್ಯ ಹಾಗೂ ದೃಢ ಮನಸ್ಸು ಅಗತ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಅಧ್ಯಕ್ಷ ಬಿ. ಶೇಷಪ್ಪ ಬಂಬಿಳ ಅವರ ಏಕಾಂಗ ಹೋರಾಟ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು.

ಕೇಂದ್ರ ಸಮಿತಿಯ ನಿರ್ದೇಶಕ ವಿವೇಕ್ ಶೆಟ್ಟರ್ ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಪದಾಧಿಕಾರಿಗಳು ಇನ್ನಷ್ಟು ಬದ್ಧತೆಯಿಂದ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷ ಶಿವರಾಜ್ ಅಯ್ಯರ್ ಮಾತನಾಡಿ, ಸಂಸ್ಥೆಯ ಗುರಿ ಮತ್ತು ಕನಸುಗಳನ್ನು ಸಾಕಾರಗೊಳಿಸಲು ಎಲ್ಲರೂ ‘ನಮ್ಮ ಸಂಸ್ಥೆ’ ಎಂಬ ಹೆಮ್ಮೆಯಿಂದ ಅಂತರಾಳದ ಉತ್ಸಾಹದೊಂದಿಗೆ ದುಡಿಯಬೇಕು. ಬದುಕಿನ ಹೋರಾಟದ ಜೊತೆಗೆ ಅನ್ಯಾಯದ ವಿರುದ್ಧದ ಹೋರಾಟವೂ ನಿರಂತರವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಪೂರ್ವಿ ಬಿ.ಎಸ್. ಅವರ ಗಣೇಶ ಶ್ರುತಿಯೊಂದಿಗೆ ವೇದಿಕೆ ಕಾರ್ಯಕ್ರಮ ಶುರುವಾಯಿತು. ಕುಮಾರಿ ವಾರುಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಕೆ.ಎಸ್., ಪದ್ಮನಾಭ ಅಲಪೆ, ಸುಮನ್ ಕಂದ, ದೇವರಾಜ್ ಶ್ರೀನಿವಾಸ ನಾಯಕ್, ಸುರೇಶ್ ಪೂಜಾರಿ, ಪ್ರವೀಣ್ ಕುಮಾರ್, ಆನಂದ ಸೋಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಮಕ್ಕಳಿಂದ ಭರತನಾಟ್ಯ ನೃತ್ಯ ಹಾಗೂ ಹಾಡುಗಳ ಮನೋರಂಜನಾ ಕಾರ್ಯಕ್ರಮಗಳು ಗಮನಸೆಳೆದವು.

error: Content is protected !!