ಮಂಗಳೂರು: ತುಳುನಾಡಿನ ಸರ್ವ ಧರ್ಮೀಯರ ಹಬ್ಬ, ಆಚರಣೆ ಹಾಗೂ ತುಳುನಾಡಿನ ಆಯನ ಜಾತ್ರೆ ಮುಂತಾದ ವಿಶೇಷ ದಿನಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ʻಕಾಲ ಕೋಂದೆʼ ತುಳು ದಿನದರ್ಶಿಕೆಯು 13ನೇ ವರ್ಷದ ಬಿಡುಗಡೆಯನ್ನು ಪತ್ರಿಕಾ ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ತುಳುವರ ‘ಸಿಂಗೊಡೆ’ಯಿಂದ ಪ್ರಾರಂಭವಾಗಿ ಸಂಕ್ರಾಂತಿ, ತಿಥಿ, ನಕ್ಷತ್ರಗಳನ್ನು (ಭರಣಿ, ಕಿರ್ತಿಕೆ ಇತ್ಯಾದಿ) ಕೆಡ್ವಾಸ, ದೀಪಾವಳಿ ಬಲಿಲೆಪ್ಪುನ ದಿನ, ಪತ್ತನಾಜೆ, ಆಟಿ, ಸೋಣ, ಮಾರ್ನಮಿ, ಅಯನೊ, ಕೋಲ, ಕೊಡಿ. ತೇರ್, ಜಾತ್ರೆಗಳು ಮೊದಲಾದ ವಿಶೇಷತೆ, ಮೌಢ್ಯ ಹಾಗೆಯೇ ಗ್ರಹಣ ಕಾಲಗಳ ಬಗೆಗೆ ನಿಖರವಾಗಿ ತಿಳಿಸಲಾಗಿರುವ ಕ್ಯಾಲೆಂಡರ್‌ನಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಭೌದ್ಧ, ಜೈನ ಧರ್ಮಗಳ ಹಬ್ಬಗಳ ಬಗೆಗೆ ಮಾಹಿತಿ ನೀಡುವ ಈ ಕ್ಯಾಲೆಂಡರ್ ನಾಡಿನ ಸಮಸ್ತರಿಗೆ ಬಹುಪಯೋಗಿ ದಿನದರ್ಶಿಕೆಯಾಗಲಿದೆ ಎಂದರು.
ತುಳು ತಿಂಗಳು ಪ್ರಾರಂಭವಾಗುವುದು “ಸೌರಮಾನ ಯುಗಾದಿ” ಅಥವಾ ತುಳುವರ ʻಬಿಸು’ ಕೇರಳದ ‘ವಿಶು’ವಿನಿಂದ. ಹಾಗಾಗಿ ತುಳು ತಿಂಗಳಿನ ಆರಂಭ ʻಪಗ್ಗು’ ವಿನಿಂದ ಆಗಿದೆ. ಹಾಗೆಯೇ ತುಳುವಿನ ಕೊನೆಯ ತಿಂಗಳು ʻಸುಗ್ಗಿʼ ಆಗಿರುತ್ತದೆ. ಆದರೆ ಹೆಚ್ಚಾಗಿ ಜನರು ಪಾಶ್ಚಾತ್ಯ ಕ್ಯಾಲೆಂಡರ್‌ಗಳನ್ನೇ ಬಳಸುತ್ತಿರುವುದರಿಂದ ತುಳು ಕ್ಯಾಲೆಂಡರನ್ನು ಅದರಂತೆಯೆ ಜನವರಿ ತಿಂಗಳಿನಿಂದ ಇಲ್ಲಿ ವಿನ್ಯಾಸಗೊಳಿಸಲಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ತುಳುವಿನ ಪ್ರತೀ ತಿಂಗಳು ಆರಂಭವಾಗುವುದು ವಿದೇಶಿ ಕ್ಯಾಲೆಂಡರಿನ ಮಧ್ಯದ ಭಾಗದಿಂದ, ಹಾಗೆಯೇ ತುಳು ಮಾಸವು ಪ್ರತೀ ತಿಂಗಳು “ಸಂಕ್ರಾಂತಿ’ ದಿನದಂದು ಕೊನೆಗೊಳ್ಳುವುದು. ಅಂದು ದೈವ, ದೇವರುಗಳ ಆಲಯವನ್ನು ತೊಳೆದು, ಒಪ್ಪವಾಗಿರಿಸಿ ಪೂಜೆ, ಪುನಸ್ಕಾರವನ್ನು ಕೈಗೊಳ್ಳುತ್ತಾರೆ. ಮರು ದಿನ “ಸಿಂಗೊಡೆ’ ಇಲ್ಲಿನ ರೈತಾಪಿ ಜನರಿಗೆ ಹಾಗೂ ತುಳುವರಿಗೆ ರಜೆಯ ದಿನ. ಅಂದು ಅವರು, ಯಾವೊಂದು ಹೊಸ ಕೆಲಸದಲ್ಲಿ ತೊಡಗಿಕೊಳ್ಳುವುದಿಲ್ಲ. ಇದು ತುಳುವರಿಗೆ ವಿಶಿಷ್ಟವಾದ ದಿನ ಎಂದರು.
ʻತುಳು ತಿಂಗಳು ‘ಪಗ್ಗು, ದೇಶ, ಕಾರ್ತೆಲ್, ಆಟಿ, ಸೋಣ, ನಿರ್ನಾಲ, ಬೊಂತೆಲ್, ಜಾರ್ದೆ, ಪೆರಾರ್ದೆ, ಪೊನ್ನಿ, ಮಾಯಿ, ಸುಗ್ಗಿವರೆಗೆ ಒಟ್ಟು 12 ತಿಂಗಳುಗಳಿಂದ ಕೂಡಿದೆ. (15 ಜನವರಿ 2026ನೇ ಇಸವಿಯಿಂದ 12 ಫೆಬ್ರವರಿ 2026ರವರೆಗೆ) ಪೊನ್ನಿ” ತಿಂಗಳು, ಹಾಗೂ 15 ಎಪ್ರಿಲ್ ನಿಂದ 15 ಮೇವರೆಗಿನ ʻಪಗ್ಗು’ ತಿಂಗಳು 26 ಡಿಸೆಂಬರ್ 2026 ರಿಂದ 14 ಜನವರಿ 2027ರ ವರೆಗಿನ ಈ ಮೂರು ತಿಂಗಳು 29 ದಿನದ ಕಿರು ಅವಧಿಯ ಕನಿಷ್ಠ ಮಾಸವಾಗಿದೆ. ಇನ್ನು ಸುಧೀರ್ಘ ಮಾಸವಾದ ʻಆಟಿ’ ತಿಂಗಳು 17 ಜುಲೈನಿಂದ 17 ಆಗಸ್ಟ್ ತಾರೀಕಿನವರೆಗೆ ಒಟ್ಟು 32 ದಿನವನ್ನು ಹೊಂದಿರುವುದು ವಿಶೇಷವಾಗಿದೆ ಎಂದು ತಾರನಾಥ ಗಟ್ಟಿ ಹೇಳಿದರು.
ಹೀಗೆ ತುಳುವಿನಲ್ಲಿ ಸಮಗ್ರ ಹಬ್ಬ, ಹರಿದಿನ, ಜಾತ್ರೆಗಳ ಬಗೆಗಿನ ಮಾಹಿತಿ ನೀಡುತ್ತಿರುವ ತುಳು-ಕನ್ನಡ ʻಕಾಲಕೋಂದೆ’ ಕ್ಯಾಲೆಂಡರನ್ನು, ತುಳುವಿನ ಪ್ರಥಮ ಗಣಕೀಕೃತ ಲಿಪಿ “ತೌಳವ” ದ ವಿನ್ಯಾಸಕಾರ ಡಾ| ಪ್ರವೀಣ್ ರಾಜ್ ಎಸ್. ರಾವ್ (RCSS) ಅವರು ತಯಾರು ಮಾಡಿದ್ದಾರೆ. ‘ತೌಳವ” ತುಳು ಲಿಪಿ ತಂತ್ರಾಂಶ’ದ ಸಹಾಯದಿಂದ ಕಳೆದ 12 ವರ್ಷಗಳಿಂದ ಪ್ರತೀ ವರ್ಷವೂ ಕ್ಯಾಲೆಂಡರನ್ನು ತಯಾರಿಸುತ್ತಿದ್ದು, ಸಾರ್ವಜನಿಕರಿಗೆ ಉಚಿತವಾಗಿ ನೀಡುತ್ತಾ ಬರುತ್ತಿದ್ದಾರೆ. ಪ್ರದೀಪ್ ಡಿ’ಸೋಜ ವಿನ್ಯಾಸ ಸಹಕಾರ ಮತ್ತು ಶ್ರೀ ಸತ್ಯಶಂಕರ್ ಬೆಂಡೋಡು ತಾಂತ್ರಿಕ ಸಹಕಾರವನ್ನು ನೀಡುತ್ತಿದ್ದಾರೆ ಎಂದು ನುಡಿದರು.
ಆದರ್ಶ ತಾಂತ್ರಿಕ ಶಿಕ್ಷಣ ಸಂಸ್ಥೆ, ಉಪ್ಪಳ, ಕಾಸರಗೋಡು ಇದರ ಪ್ರಾಂಶುಪಾಲರಾದ ರಾಮಕೃಷ್ಣ ಸಂತಡ್ಕ, ಪ್ರಥಮ ಡಿಜಿಟಲ್ ತುಳು ಲಿಪಿ ವಿನ್ಯಾಸಕ ಡಾ| ಪ್ರವೀಣ್ ರಾಜ್ ಎಸ್. ರಾವ್ RCSSನ ತಾಂತ್ರಿಕ ಸಲಹೆಗಾರ ವಿವೇಕ್ ಉಪಸ್ಥಿತರಿದ್ದರು. ಈ ಕ್ಯಾಲೆಂಡರ್ ನಿರ್ಮಿಸುವಲ್ಲಿ ನಿರ್ಮಲಾ ಪಿ. ರಾವ್, ಗೀತಾ ಹಾಗೂ ಸಿಬ್ಬಂದಿವರ್ಗದವರು ಸಹಕರಿಸಿದ್ದಾರೆ.