
ಹರಿಯಾಣ: ಮಹಿಳೆಯೊಬ್ಬಳು ತಡರಾತ್ರಿ ವಾಹನಕ್ಕಾಗಿ ಕಾಯುತ್ತಿದ್ದ ವೇಳೆ ಲಿಫ್ಟ್ ಕೊಡುವುದಾಗಿ ಹೇಳಿ ವ್ಯಾನ್‌ನೊಳಗೆ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ರಸ್ತೆಗೆ ಎಸೆದು ಪರಾರಿಯಾದ ಘಟನೆ ಫರಿದಾಬಾದ್ ನಲ್ಲಿ ನಡೆದಿದೆ. ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಇಬ್ಬರು ಆರೋಪಿಗಳು ಫರಿದಾಬಾದ್ ನಿವಾಸಿಗಳು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಮಹಿಳೆ ತನ್ನ ಪತಿ ಮತ್ತು ತಾಯಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಸೋಮವಾರ ರಾತ್ರಿ 8.30ರ ವೇಳೆಗೆ, ತನ್ನ ತಾಯಿಯೊಂದಿಗೆ ಜಗಳವಾಡಿ ಮನೆಯಿಂದ ಹೊರಟು ಸ್ನೇಹಿತೆಯನ್ನು ಭೇಟಿಯಾಗಲು ಹೋಗಿದ್ದರು. ಸಂತ್ರಸ್ತೆ ತನ್ನ ಸಹೋದರಿಗೆ ಕರೆ ಮಾಡಿ, ಮನೆಯಲ್ಲಿ ನಡೆದ ಜಗಳದಿಂದ ತಾನು ಅಸಮಾಧಾನಗೊಂಡಿದ್ದೇನೆ ಮತ್ತು ಸ್ನೇಹಿತೆಯ ಬಳಿ ಹೋಗುತ್ತಿದ್ದೇನೆ ಎಂದು ಹೇಳಿದ್ದಳು, ಮೂರು ಗಂಟೆಗಳಲ್ಲಿ ಹಿಂತಿರುಗುತ್ತೇನೆ ಎಂದು ಭರವಸೆ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 12.30 ರ ಸುಮಾರಿಗೆ, ಅವಳು ಮನೆಗೆ ಮರಳಲು ಮೆಟ್ರೋ ಚೌಕ್ ತಲುಪಿ ಆಟೋಗಳನ್ನು ಹುಡುಕುತ್ತಿದ್ದ ವೇಳೆ ಒಂದು ಇಕೋ ವ್ಯಾನ್ ಬಂದಿದ್ದು ಅದರಲ್ಲಿದ್ದವರು ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿದ್ದಾರೆ. ನಂಬಿ ಮಹಿಳೆ ವಾಹನ ಹತ್ತಿದ್ದು, ಇಬ್ಬರು ಆಕೆಯನ್ನು ಮನೆಗೆ ಕರೆದೊಯ್ಯುವ ಬದಲು ಫರಿದಾಬಾದ್-ಗುರುಗ್ರಾಮ್ ರಸ್ತೆಯ ಕಡೆಗೆ ವಾಹನ ಚಲಾಯಿಸಿ ವ್ಯಾನ್ ಅನ್ನು ನಿರ್ಜನ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ.
ಆರೋಪಿಗಳಲ್ಲಿ ಒಬ್ಬನು ವಾಹನ ಚಲಾಯಿಸುವುದನ್ನು ಮುಂದುವರೆಸಿದರೆ, ಇನ್ನೊಬ್ಬನು ಚಲಿಸುವ ವಾಹನದೊಳಗೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ವ್ಯಾನ್ ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲಿ ಚಲಿಸುತ್ತಲೇ ಇತ್ತು. ವಿರೋಧಿಸಿದರೂ ಮಹಿಳೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಆರೋಪಿ ಮಹಿಳೆಯನ್ನು ಚಲಿಸುತ್ತಿದ್ದ ವ್ಯಾನ್‌ನಿಂದ ಹೊರಗೆ ತಳ್ಳಿ ಪರಾರಿಯಾಗಿದ್ದು, ಘಟನೆಯಲ್ಲಿ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.