ಪೈವಳಿಕೆಯ ಜಿಯಾ ಸಹಚರ, ನಟೋರಿಯಸ್‌ ಕ್ರಿಮಿನಲ್‌ ಮೀಸೆ ರವೂಫ್ ಪೊಲೀಸ್‌ ಬಲೆಗೆ

ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿ, 25ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳ ಆರೋಪಿ ಪೈವಳಿಕೆ ಜಿಯಾ ಸಹಚರ ಅಬ್ದುಲ್ ರವೂಫ್ @ ಮೀಸೆ ರವೂಫ್ (48) ಎಂಬಾತನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಬ್ದುಲ್ ರವೂಫ್ @ ಮೀಸೆ ರವೂಫ್, ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳದಲ್ಲಿರುವ ವಿಜಯಾ ಬ್ಯಾಂಕ್ ಎದುರಿನ ಮುಸ್ತಫಾ ಮಂಜಿಲ್ ನಿವಾಸಿಯಾಗಿದ್ದಾನೆ.

ಆರೋಪಿಯ ವಿರುದ್ಧ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 19 ಪ್ರಕರಣಗಳು ದಾಖಲಾಗಿದ್ದು, ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ಸೇರಿ ಒಟ್ಟು 25ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಾವೂರು ಪೊಲೀಸ್ ಠಾಣೆಯ ಪ್ರಕರಣದಲ್ಲಿ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು. ಇದೇ ವೇಳೆ, ಕೋಣಾಜೆ ಪೊಲೀಸ್ ಠಾಣೆಯ ಐದು ಪ್ರಕರಣಗಳಲ್ಲಿ ಆರೋಪಿಯನ್ನು ಉದ್ಘೋಷಿತ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿರುತ್ತದೆ. ಅಲ್ಲದೆ, ಮಂಜೇಶ್ವರ ಪೊಲೀಸ್ ಠಾಣೆಯ ಮತ್ತೊಂದು ಪ್ರಕರಣದಲ್ಲಿಯೂ ಮಾನ್ಯ ನ್ಯಾಯಾಲಯದಿಂದ ದಸ್ತಗಿರಿ ವಾರಂಟ್ ಜಾರಿಗೊಂಡಿದೆ.

ಅಬ್ದುಲ್ ರವೂಫ್ @ ಮೀಸೆ ರವೂಫ್ ಅಂತರರಾಜ್ಯ ಮಟ್ಟದ ನೋಟೋರಿಯಸ್ ಅಪರಾಧಿಯಾಗಿದ್ದು, ಕೇರಳ ರಾಜ್ಯದ ಉಪ್ಪಳ ಪೈವಳಿಕೆಯ ಇಸುಬು ಜಿಯಾದ್ @ ಜಿಯಾ ಎಂಬಾತನ ಸಹಚರನಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ ಕೆ. ಅವರ ನೇತೃತ್ವದ ತಂಡದ ಎಎಸ್‌ಐ ಚಂದ್ರಶೇಖರ್ ಹಾಗೂ ಸಿಬ್ಬಂದಿ ಹೆಡ್‌ಕಾನ್ಸ್ಟೇಬಲ್ ರೆಜಿ ವಿ.ಎಂ., ದಾಮೋದರ ಕೆ. ಮತ್ತು ಹಾಲೇಶ್ ನಾಯ್ಕ್ ದಿನಾಂಕ 16-12-2025 ರಂದು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

ಬಂಧಿತ ಆರೋಪಿಯ ವಿರುದ್ಧ ದರೋಡೆ, ರಾಬರಿ, ಮನೆ ಕಳ್ಳತನ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿದಂತೆ ವಿವಿಧ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!